ರಾಜ್ಯಕ್ಕೆ ಮಧ್ಯಂತರ ನಿರಾಳ: 1200 ಕೋಟಿ ರೂ. ನೆರೆ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ
ಬೆಂಗಳೂರು: ನೆರೆ ಪರಿಹಾರದ ವಿಚಾರದಲ್ಲಿ ಕರ್ನಾಟಕದ ಆಕ್ರೋಶಭರಿತ ದನಿಗೆ ಕೊನೆಗೂ ಕಿವಿಯಾದ ಕೇಂದ್ರ ಸರ್ಕಾರ 22 ಜಿಲ್ಲೆಗಳ ಸಂತ್ರಸ್ತರ ತುರ್ತು ಪರಿಹಾರಕ್ಕೆಂದು 1200 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ನಿಟ್ಟುಸಿರು ಬಿಟ್ಟಿದೆ.
ರಾಜ್ಯ ಸಲ್ಲಿಸಿರುವ ನೆರೆಪರಿಹಾರ ಬೇಡಿಕೆ ವರದಿಯಲ್ಲಿನ ಕೆಲವು ಆಕ್ಷೇಪಣೆಗಳಿಗೆ ಸ್ಪಷ್ಟನೆ ದೊರೆತ ಕೂಡಲೇ ಉಳಿದ ಮೊತ್ತ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿರುವ ಕೇಂದ್ರ, ನೆರೆ ಪರಿಹಾರ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವ ವಾಗ್ದಾನ ಮಾಡಿದೆ.
ಆಗಸ್ಟ್ ಮೊದಲ ವಾರದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ರಾಜ್ಯದ ಹಲವೆಡೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಬೆಳೆ ಹಾನಿಯಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆರೆ ಪೀಡಿತ ಪ್ರದೇಶ ಗಳನ್ನು ವೀಕ್ಷಿಸಿ ಸಮೀಕ್ಷೆಗಾಗಿ ಕೇಂದ್ರ ತಂಡವನ್ನು ಕಳುಹಿಸಿದ್ದರು. ಆ ಬಳಿಕವೂ ಪರಿಹಾರ ಬಿಡುಗಡೆಗೆ ತಡವಾಗಿತ್ತು. ಇದು ರಾಜ್ಯದ ಜನರನ್ನು ಕೆರಳಿಸಿತ್ತು. ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದ್ದಂತೆ ಸಂಪುಟ ಸಭೆಯಲ್ಲೇ ಕೇಂದ್ರದ ವಿರುದ್ಧ ಆಕ್ರೋಶ ಸ್ಪೋಟಗೊಂಡಿತ್ತು. ‘
ಈ ಬೆಳವಣಿಗೆಗಳ ಬೆನ್ನಲ್ಲೇ ಗುರುವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಗೃಹ ಇಲಾಖೆ ಅಧಿಕಾರಿಗಳು ರಾಜ್ಯದ ವರದಿ ಬಗ್ಗೆ ಪರಾಮರ್ಶೆ ನಡೆಸಿ ಕೆಲ ವಿಚಾರಗಳಲ್ಲಿ ಸ್ಪಷ್ಟನೆ ಬಯಸಿದ್ದರು. ಈ ನಡುವೆ ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನೇ ತಿರಸ್ಕರಿಸಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಶುಕ್ರವಾರ ಸಂಜೆ ವೇಳೆಗೆ 1200 ಕೋಟಿ ರೂ. ಬಿಡುಗಡೆಗೊಳಿಸಿರುವ ಬಗ್ಗೆ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿತು.
ಈ ನೆರವು ಆಸ್ತಿ, ಬೆಳೆ ನಷ್ಟ, ಬೆಳೆ ಹಾನಿಗೆ ಪರಿಹಾರವಲ್ಲ. ಬದಲಿಗೆ ತುರ್ತು ಪ್ರತಿಕ್ರಿಯೆಗೆ ಆಗುವ ಖರ್ಚು ತೂಗಿಸಲು, ತಕ್ಷಣದ ಪರಿಹಾರ ಮತ್ತು ಪುನರ್ವಸತಿಗಾಗಿ ಖರ್ಚುಗಳನ್ನು ಪೂರೈಸಲು ಬಳಕೆ ಮಾಡಬಹುದು. ಆದರೆ ರಾಜ್ಯ ಸರ್ಕಾರ ಈ ಕಾರ್ಯಕ್ಕೆ ತನ್ನ ಬೊಕ್ಕಸದ ಹಣವನ್ನು ಈಗಾಗಲೇ ಹಂಚಿಕೆ ಮಾಡಿರುವುದರಿಂದ ಕೇಂದ್ರದಿಂದ ಬಂದ ಹಣವನ್ನು ಇತರ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಹಿರಿಯ ಅಧಿಕಾರಿಗಳು, ಕೇಂದ್ರ ಗೃಹ ಇಲಾಖೆ ಪರಿಹಾರ ಬಿಡುಗಡೆ ಮಾಡಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ನಾವು ಕೂಡ ಸ್ಪಷ್ಟನೆಯನ್ನು ಶೀಘ್ರದಲ್ಲೇ ನೀಡುತ್ತೇವೆ. ಎನ್ಡಿಆರ್ಎಫ್ನ ಪರಿಹಾರ ನಿರೀಕ್ಷಿಸಿದಷ್ಟು ಸಿಗುವ ವಿಶ್ವಾಸವಿದೆ ಎಂದರು.
ಜೋಶಿ, ಗೌಡ ಒತ್ತಡ: ಪ್ರವಾಹ ಪರಿಹಾರ ನೀಡುವಲ್ಲಿ ವಿಳಂಬವಾದ್ದರಿಂದ ಪಕ್ಷದ ಸಂಸದರ ವಿರುದ್ಧ ದನಿ ಎದ್ದಿದೆ. ಹೀಗಾಗಿ ಕೂಡಲೇ ನೆರವಾಗುವಂತೆ ಸಚಿವ ಪ್ರಲ್ಹಾದ ಜೋಶಿ ಮತ್ತು ಸದಾನಂದ ಗೌಡ ಗೃಹ ಸಚಿವ ಅಮಿತ್ ಷಾ ಅವರನ್ನು ಒತ್ತಾಯಿಸಿದ್ದರು. ಆದರೆ, ಎಲ್ಲ ರಾಜ್ಯಗಳಿಗೆ ಒಂದೇ ಸಮಯದಲ್ಲಿ ಪರಿಹಾರ ಘೊಷಣೆಯಾಗಬೇಕಿದೆ, ಕರ್ನಾಟಕಕ್ಕೆಂದು ಪ್ರತ್ಯೇಕವಾಗಿ ಮೊದಲೇ ಹಣ ಬಿಡುಗಡೆ ಮಾಡಿದರೆ, ಬೇರೆ ರಾಜ್ಯಗಳು ಕೇಳುವ ಪ್ರಶ್ನೆಗಳಿಗೆ ನಾವು ಉತ್ತರಿಸುವುದು ಹೇಗೆ ಎಂದು ಅಮಿತ್ ಷಾ ವಿವರಿಸಿದ್ದಾರೆನ್ನಲಾಗಿದೆ.
ರಾಜಕೀಯ ಲೆಕ್ಕಾಚಾರವಿಲ್ಲ: ಪರಿಹಾರ ಹಂಚಿಕೆಯಲ್ಲಿ ರಾಜಕೀಯ ಲಾಭದ ಬಗ್ಗೆ ಲೆಕ್ಕಾಚಾರ ಹಾಕುವುದಿದ್ದರೆ ನಾವು ಮಹಾರಾಷ್ಟ್ರಕ್ಕೆ ಮೊದಲೇ ನೆರವಿನ ಘೊಷಣೆ ಮಾಡುತ್ತಿದ್ದೆವು. ಅಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹಾಗಿದ್ದರೂ, ಆ ರಾಜ್ಯಕ್ಕೆ ಕೇಂದ್ರದಿಂದ ಹಣ ಬಿಡುಗಡೆ ಆಗಿಲ್ಲ ಎಂದರೆ ನಾವು ರಾಜಕೀಯ ಮಾಡಿಲ್ಲ ಎಂದೇ ಅರ್ಥ. ಕರ್ನಾಟಕದ ಸಮಸ್ಯೆ ಅರಿವಿಗೆ ಬಂದಿದೆ. ಸ್ಪಷ್ಟೀಕರಣಕ್ಕೆ ಉತ್ತರ ಸಿಕ್ಕ ಕೂಡಲೇ ಗೃಹ ಇಲಾಖೆ ಅಧಿಕಾರಿಗಳು ಉನ್ನತ ಸಮಿತಿಗೆ ಪರಿಹಾರ ಪ್ರಮಾಣದ ಕುರಿತ ಶಿಫಾರಸು ಮಾಡಲಿದ್ದಾರೆ ಎಂದು ಷಾ ಇಬ್ಬರು ಸಚಿವರಿಗೆ ತಿಳಿಸಿದ್ದಾರೆ. ಮಧ್ಯಂತರ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ