ಭರಾಟೆಯಲ್ಲಿ ಹದಿನೇಳು ಖಳನಾಯಕರು!
ಬೆಂಗಳೂರು: ಒಬ್ಬ ಹೀರೋ ಇರಬೇಕು. ಅವನಿಗೆ ಎದುರಾಗಿ ಒಂದಿಬ್ಬರು ವಿಲನ್ಗಳು ಅಬ್ಬರಿಸಬೇಕು. ಇದು ಬಹುತೇಕ ಮಾಸ್ ಸಿನಿಮಾಗಳ ಕಮರ್ಷಿಯಲ್ ಸೂತ್ರ. ಆದರೆ ‘ಭರ್ಜರಿ’ ಚೇತನ್ಕುಮಾರ್ ನಿರ್ದೇಶನ ಮಾಡಿರುವ ‘ಭರಾಟೆ’ ಸಿನಿಮಾ ಆ ಸೂತ್ರವನ್ನು ತುಸು ಜಾಸ್ತಿಯೇ ವಿಸ್ತರಿಸಿದೆ. ಅಂದರೆ, ಈ ಚಿತ್ರದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 17 ಖಳನಾಯಕರು ಗತ್ತು ಪ್ರದರ್ಶಿಸಲಿದ್ದಾರೆ! ಈ ಸಿನಿಮಾದಲ್ಲಿ ಏಳು ವಿಲನ್ಸ್ ಇರಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಡಿತ್ತು. ಈಗ ಖಳನಟರ ಸಂಖ್ಯೆ 17ಕ್ಕೆ ಏರಿರುವುದು ಪ್ರೇಕ್ಷಕರ ನಿರೀಕ್ಷೆ ಹೆಚ್ಚಲು ಕಾರಣವಾಗಿದೆ. ಈಗಾಗಲೇ ತಿಳಿದಿರುವಂತೆ ಸಹೋದರರಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಮೊದಲ ಬಾರಿಗೆ ಜತೆಯಾಗಿ ತೆರೆಹಂಚಿಕೊಂಡಿದ್ದು, ವಿಲನ್ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅವರ ಜತೆಗೆ ಶೋಭರಾಜ್, ಬಾಲಾ ರಾಜ್ವಾಡಿ, ಅವಿನಾಶ್, ಪೆಟ್ರೋಲ್ ಪ್ರಸನ್ನ, ಮಂಜುನಾಥ್ ಗೌಡ, ಧರ್ಮ, ದೀಪಕ್ ರಾಜ್ ಶೆಟ್ಟಿ, ಶರತ್ ಲೋಹಿತಾಶ್ವ ಮುಂತಾದವರ ದಂಡು ಸೇರಿಕೊಂಡಿದೆ. ಪ್ರತಿಯೊಬ್ಬರ ಕಾಸ್ಟ್ಯೂಮ್ ಮತ್ತು ಗೆಟಪ್ ವಿಭಿನ್ನವಾಗಿದ್ದು, ಕುತೂಹಲ ಮೂಡಿಸಿದೆ. ಇಷ್ಟೊಂದು ಪಾತ್ರಧಾರಿಗಳನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸದ್ಯಕ್ಕೆ ನಿಗೂಢ. ಈ ಹಿಂದೆ ಚೇತನ್ ನಿರ್ದೇಶಿಸಿದ್ದ ‘ಬಹದ್ದೂರ್’ ಮತ್ತು ‘ಭರ್ಜರಿ’ ಸಿನಿಮಾಗಳು ಮಾಸ್ ಕಥಾಹಂದರ ಹೊಂದಿದ್ದವು. ಈ ಬಾರಿ ಅದರ ಜತೆಗೆ ಫ್ಯಾಮಿಲಿ ಎಲಿಮೆಂಟ್ಗಳನ್ನೂ ಸೇರಿಸಿ ಕಥೆ ಹೆಣೆದಿದ್ದಾರಂತೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ‘ಭರಾಟೆ’ ಅ.18ರಂದು ತೆರೆಕಾಣಲಿದ್ದು, ಶ್ರೀಮುರಳಿಗೆ ಜೋಡಿಯಾಗಿ ‘ಕಿಸ್’ ಖ್ಯಾತಿಯ ನಟಿ ಶ್ರೀಲೀಲಾ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ