ಸೇನಾ ಭದ್ರತೆ ಹೊಂದಿರುವ ಈ ಆನೆಯ ಹಿಂದಿದೆ ಒಂದು ರೋಚಕ ಕತೆ!


ಕೊಲಂಬೋ: ನಡುಂಗಮುವ ರಾಜ ಎಂಬ ಹೆಸರಿನ 65 ವರ್ಷದ ಸೆಲೆಬ್ರಿಟಿ ಆನೆ ಅಂದಾಜು 10.5 ಅಡಿ ಎತ್ತರವಿದೆ. ಶ್ರೀಲಂಕಾದಲ್ಲೇ ಅತಿ ಉದ್ದದ ದಂತವನ್ನು ಹೊಂದಿರುವ ಈ ಆನೆಗೆ ಇನ್ನೊಂದು ವಿಶೇಷತೆ ಇದೆ. ಅದನ್ನು ಹೇಳಿದರೆ ಒಮ್ಮೆ ನೀವು ಬೆರಗಾಗುವುದು ಖಂಡಿತ.
ಈ ಆನೆಗೆ ಒಂದು ವಿಶೇಷ ಸೌಲಭ್ಯವಿದೆ. ಅದೇನೆಂದರೆ, ಈ ಆನೆ ಎಲ್ಲೇ ಹೋದರೂ ಶಸ್ತ್ರಸಜ್ಜಿತ ಕಾವಲುಗಾರರು ಇದರ ಹಿಂದೆ ಇದ್ದೇ ಇರುತ್ತಾರೆ. ಈ ಬಗ್ಗೆ ಮಾತನಾಡಿರುವ ಆನೆಯ ಮಾಲೀಕ ಲಂಕಾದಲ್ಲಿ ನಡೆಯುವ ಹಬ್ಬದ ದಿನಗಳಲ್ಲಿ ಮುಖ್ಯರಸ್ತೆಗಳಲ್ಲಿ ಆನೆ ಸಾಗುವಾಗ ಅದರ ರಕ್ಷಣೆಗಾಗಿಯೇ ಸರ್ಕಾರ ಭದ್ರತೆಯನ್ನು ನಿಯೋಜಿಸಿದೆ ಎಂದು ತಿಳಿಸಿದ್ದಾರೆ.
2015ರ ಸೆಪ್ಟೆಂಬರ್​ನಲ್ಲಿ ಆನೆ ದಾರಿಯಲ್ಲಿ ಸಾಗುವಾಗ ವಾಹನ ಚಾಲಕನೊಬ್ಬ ಆನೆಗೆ ಅಪ್ಪಳಿಸಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದು ಸರ್ಕಾರದ ಗಮನಕ್ಕೆ ಬಂದು, ನನ್ನನ್ನು ಸಂಪರ್ಕಿಸಿ ಆನೆ ರಸ್ತೆಯಲ್ಲಿ ಸಾಗುವಾಗ ರಕ್ಷಣೆ ಒದಗಿಸುವುದಾಗಿ ತಿಳಿಸಿತು ಎಂದು ಆನೆ ಮಾಲೀಕ ಹರ್ಷ ಧರ್ಮವಿಜಯ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಜನಜಂಗುಳಿಯ ರಸ್ತೆಯಲ್ಲಿ ಆನೆ ತಿರುಗಾಡುವಾಗ ದಾರಿ ಮಾಡಿಕೊಡಲು ಸೇನಾ ಘಟಕದಲ್ಲಿ ಹೆಚ್ಚವರಿಯಾಗಿ ಎರಡು ರಕ್ಷಣಾ ತಂಡಗಳು ಪ್ರತಿನಿತ್ಯ ಇದರ ನಿರ್ವಹಣೆ ಮಾಡುತ್ತಿದೆ. ರಾಜ ಹೆಸರಿನ ಆನೆಯು ಅನಧಿಕೃತ ರಾಷ್ಟ್ರದ ನಿಧಿಯಾಗಿದೆ. ಶ್ರೀಲಂಕಾದ ಪವಿತ್ರ ಬುದ್ಧನ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಆಚರಣೆಯಲ್ಲಿ ಬುದ್ಧನ ಅವಶೇಷಗಳ ಪೆಟ್ಟಿಗೆಯನ್ನು ಕೊಂಡೊಯ್ಯುವ ಕೆಲ ದಂತದ ಆನೆಗಳಲ್ಲಿ ಇದು ಕೂಡ ಒಂದಾಗಿದೆ. ಹೀಗಾಗಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ವಾರ್ಷಿಕ ಆಚರಣೆಗಾಗಿ ರಾಜ ಅಂದಾಜು 90 ಕಿ.ಮೀ ದೂರದ ಕ್ಯಾಂಡಿಯ ಹಿಲ್​ ರೆಸಾರ್ಟ್​ಗೆ ನಡೆದುಕೊಂಡು ಹೋಗುತ್ತದೆ. ಪ್ರತಿದಿನ 25 ರಿಂದ 30 ಕಿ.ಮೀ ಕ್ರಮಿಸುತ್ತದೆ. ವಾತಾವರಣ ತಂಪಾಗಿರುವ ಕಾರಣ ರಾತ್ರಿಯ ವೇಳೆಯೇ ಅದರ ಪ್ರಯಾಣವಿರುತ್ತದೆ. ಆಗಸ್ಟ್​ ತಿಂಗಳಲ್ಲಿ ನಡೆಯುವ ಆಚರಣೆಯಲ್ಲಿ ಅಂದಾಜು 100 ಆನೆಗಳು ಭಾಗವಹಿಸುತ್ತವೆ. ಇದರೊಂದಿಗೆ ಸಾಂಪ್ರದಾಯಿಕ ನೃತ್ಯಗಾರರು, ಬೆಂಕಿ ಉಗುಳುವವರು ಹಾಗೂ ಡ್ರಮ್ಮರ್ಸ್​ಗಳು ವಿಜೃಂಭಣೆ ಆಚರಣೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಾರೆ. ಆದರೆ, ಇದಕ್ಕೆ ಪ್ರಾಣಿದಯಾ ಸಂಘದ ವಿರೋಧವು ಇದೆ. ಪ್ರಾಣಿಗಳನ್ನು ಸೆರೆಹಿಡಿದು ಅದನ್ನು ಆಚರಣೆಯ ಹೆಸರಲ್ಲಿ ಹಿಂಸಿಸಲಾಗುತ್ತದೆ ಎಂಬುದು ಅವರ ಆರೋಪವಾಗಿದೆ.
ಇತ್ತೀಚೆಗಷ್ಟೇ ಶ್ರೀಲಂಕಾದ ಪ್ರತಿಷ್ಠಿತ ಆಚರಣೆ ಎಸ್ಲಾ ಹಬ್ಬದಲ್ಲಿ ಪಾಲ್ಗೊಂಡು ಸುದ್ದಿಯಾಗಿದ್ದ ಅಸ್ಥಿಪಂಜರ ರೀತಿಯಲ್ಲಿ ಬಡಕಲಾಗಿದ್ದ 70 ವರ್ಷದ ಆನೆ ತಿಕರಿ ಮಂಗಳವಾರ ಮೃತಪಟ್ಟಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?