ಹೌಡಿ ಮೋದಿ ಹ್ಯೂಸ್ಟನ್ ಸಿದ್ಧ


ಹ್ಯೂಸ್ಟನ್: ಭಾರಿ ಸದ್ದು ಮಾಡುತ್ತಿರುವ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಲು ಅಮೆರಿಕದ ಹ್ಯೂಸ್ಟನ್​ನಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ತಮ್ಮ ನೆಚ್ಚಿನ ಪ್ರಧಾನಿಯನ್ನು ಬರಮಾಡಿಕೊಳ್ಳಲು ಭಾರತೀಯ ಮೂಲದವರು ಕಾತುರದಿಂದ ಕಾಯುತ್ತಿದ್ದಾರೆ.
ಎನ್​ಆರ್​ಸಿ ಫುಟ್​ಬಾಲ್ ಸ್ಟೇಡಿಯಂನಲ್ಲಿ ಮೂರು ಗಂಟೆಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾಗವಹಿಸುವ ಕಾರಣ ‘ಹೌಡಿ ಮೋದಿ’ ರಂಗು ಹೆಚ್ಚಿದೆ. ಈಗಾಗಲೇ 50 ಸಾವಿರ ಟಿಕೆಟ್​ಗಳೂ ಮಾರಾಟವಾಗಿದ್ದು, ಕಾರ್ಯಕ್ರಮಕ್ಕೂ ಮೊದಲೇ ದಾಖಲೆ ನಿರ್ವಿುಸಿದೆ.
ಭಾರತೀಯ ರಾಯಭಾರಿ ಹರ್ಷ್ ವಿ. ಶೃಂಗ್ಲಾ ಮತ್ತು ತಂಡ ಕಾರ್ಯಕ್ರಮದ ತಯಾರಿ ಬಗ್ಗೆ ಪರಿಶೀಲನೆ ನಡೆಸಿದ್ದು, 1,500 ಕಾರ್ಯಕರ್ತರು ದಿನದ 24 ತಾಸು ಸಿದ್ಧತೆಯಲ್ಲಿ ತೊಡಗಿದ್ದಾರೆ.ಎನ್​ಆರ್​ಜಿ ಸ್ಟೇಡಿಯಂನಲ್ಲಿ ಶುಕ್ರವಾರ ಕಾರು ರ‍್ಯಾಲಿ ಆಯೋಜಿಸಲಾಗಿದ್ದು, 200ಕ್ಕೂ ಅಧಿಕ ಕಾರುಗಳು ಇದರಲ್ಲಿ ಭಾಗಿಯಾಗಿದ್ದವು. ಎಲ್ಲೆಲ್ಲೂ ಭಾರತ ಮತ್ತು ಅಮೆರಿಕ ಬಾವುಟಗಳು ಕಂಡುಬಂತು. ವಿಶ್ವದ ಎರಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಿಂಬಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎನ್ನಲಾಗಿದೆ. ಕಾರ್ಯಕರ್ತರೆಲ್ಲರೂ ‘ನಮೋ ಅಗೈನ್’ ಎನ್ನುವ ಮುದ್ರಣ ಹೊಂದಿದ್ದ ಟೀ ಶರ್ಟ್ ಧರಿಸಿದ್ದರು.
ಏನೇನಿರಲಿದೆ?
ಭಾನುವಾರ ಬೆಳಗ್ಗೆ 6 ಗಂಟೆಗೆ (ಸ್ಥಳೀಯ ಕಾಲಮಾನ) ಎನ್​ಆರ್​ಜಿ ಸ್ಟೇಡಿಯಂ ಗೇಟುಗಳನ್ನು ತೆರೆಯಲಾಗುತ್ತದೆ, 9ಗಂಟೆ ಯೊಳಗಾಗಿ ಜನರು ಆಸೀನರಾಗಬೇಕು. 27 ತಂಡಗಳ 400 ಕಾಲವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ‘ಗಣ್ಖಉಘ‘ ನಡೆಯಲಿದೆ. 10.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಅಂತ್ಯಗೊಳ್ಳಲಿದ್ದು, ನಂತರ ಟ್ರಂಪ್ ಮತ್ತು ಮೋದಿ ಮಾತನಾಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ಅಂತ್ಯಗೊಳ್ಳಲಿದೆ. ಹಿಂದಿ, ಇಂಗ್ಲಿಷ್ ಮತ್ತು ಸ್ಪಾನಿಶ್ ಭಾಷೆಯಲ್ಲಿ ನೇರ ಪ್ರಸಾರ ಇರಲಿದೆ. ಭಾರತ ಮತ್ತು ಹ್ಯೂಸ್ಟನ್ ಮಧ್ಯೆ ಸುಮಾರು ಹತ್ತೂವರೆ ತಾಸು ಕಾಲಮಾನ ವ್ಯತ್ಯಾಸ ಇದೆ.
ಹೌಡಿ ಮೋದಿಗೆ ಹ್ಯೂಸ್ಟನ್ ಏಕೆ ಆಯ್ಕೆ?
ಭಾರತ- ಅಮೆರಿಕ ನಡುವೆ ನಡೆಯುವ ವ್ಯಾಪಾರ ವಹಿವಾಟಿನ ಶೇ.10ರಷ್ಟು ಟೆಕ್ಸಾಸ್​ನಿಂದ ನಡೆಯುತ್ತದೆ. ವಾರ್ಷಿಕ 7 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ವಸ್ತುಗಳು ಟೆಕ್ಸಾಸ್ ಮೂಲಕ ಭಾರತಕ್ಕೆ ರವಾನೆಯಾಗುತ್ತದೆ. ಭಾರತ ಹ್ಯೂಸ್ಟನ್​ನ ನಾಲ್ಕನೇ ಅತಿದೊಡ್ಡ ವ್ಯಾವಹಾರಿಕ ಪಾಲುದಾರ ಎನಿಸಿಕೊಂಡಿದೆ. ಬ್ರೆಜಿಲ್, ಚೀನಾ ಮತ್ತು ಮೆಕ್ಸಿಕೊ ನಂತರದ ಸ್ಥಾನ ಭಾರತದ್ದಾಗಿದೆ. ಹೀಗಾಗಿ ಹೌಡಿ ಮೋದಿ ಕಾರ್ಯಕ್ರಮಕ್ಕೆ ಹ್ಯೂಸ್ಟನ್​ನ್ನು ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ವಿರೋಧ ಸಾಧ್ಯತೆ
‘ಹೌಡಿ ಮೋದಿ’ ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಲು ಖಲಿಸ್ತಾನ ಮತ್ತು ನಕಲಿ ಕಾಶ್ಮೀರಿ ಸಮೂಹ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಕೆಲ ಪಾಕಿಸ್ತಾನಿ ಸಮರ್ಥಕರು ಈಗಾಗಲೇ ವ್ಯಾಟ್ಸಾಪ್, ಫೇಸ್​ಬುಕ್ ಮತ್ತು ಟ್ವಿಟ್ಟರ್ ಮೂಲಕ ಕಾರ್ಯಕ್ರಮ ವಿರೋಧಿ ಸಂದೇಶಗಳನ್ನು ರವಾನಿಸಲು ಆರಂಭಿಸಿದ್ದಾರೆ.
ಭಾರತೀಯರ ಬಗ್ಗೆ ಹೆಮ್ಮೆ
ಅಮೆರಿಕಕ್ಕೆ ಹೊರಡುವುದಕ್ಕೂ ಮುನ್ನ ಮಾತನಾಡಿದ ಮೋದಿ, ಜಾಗತಿಕ ಮಟ್ಟದಲ್ಲಿ ಭಾರತವನ್ನು ಅವಕಾಶಗಳ ಆಗರ ಎಂದು ಬಿಂಬಿಸಲು ಈ ಭೇಟಿ ಸಹಕಾರಿ. ಹಾಗೆಯೇ ಭಾರತ- ಅಮೆರಿಕ ನಡುವಿನ ಬಾಂಧವ್ಯಕ್ಕೆ ಇದು ಹೊಸ ಆಯಾಮ ನೀಡುವ ಭರವಸೆ ಇದೆ ಎಂದಿದ್ದಾರೆ. ಇದೇ ವೇಳೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಮೋದಿ, ಅಮೆರಿಕಕ್ಕೆ ಅವರು ನೀಡಿರುವ ಕೊಡುಗೆ, ಭಾರತದೊಂದಿಗಿನ ಅವರ ಬಲಿಷ್ಠ ಬಾಂಧವ್ಯ ಎರಡೂ ರಾಷ್ಟ್ರಗಳನ್ನು ಬೆಸೆದಿದೆ ಎಂದು ಹೇಳಿದ್ದಾರೆ. ಟ್ರಂಪ್ ಜತೆ ಒಂದೇ ವೇದಿಕೆಯಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಿರುವುದು ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದಿದ್ದಾರೆ.
ತಾಂತ್ರಿಕ ಕಾರಣದಿಂದ ಪಯಣ ವಿಳಂಬ: ಪ್ರಧಾನಿ ಮೋದಿ ಅಮೆರಿಕದ ಹ್ಯೂಸ್ಟನ್​ಗೆ ತೆರಳುತ್ತಿದ್ದ ವಿಮಾನ ತಾಂತ್ರಿಕ ಕಾರಣದಿಂದ ಜರ್ಮನಿಯ ಫ್ರಾಂಕ್​ಫರ್ಟ್​ನ ವಿಮಾನನಿಲ್ದಾಣದಲ್ಲಿ ಎರಡು ಗಂಟೆಗಳ ಕಾಲ ನಿಂತಿತ್ತು. ಈ ವೇಳೆ ಜರ್ಮನಿಯ ಭಾರತೀಯ ರಾಯಭಾರಿ ಮುಕ್ತಾ ತೋಮರ್ ಮತ್ತು ಇನ್ನೋರ್ವ ಅಧಿಕಾರಿ ಪ್ರತಿಭಾ ಪಾರ್ಕರ್ ಮೋದಿಯನ್ನು ಭೇಟಿಯಾಗಿದ್ದರು. ಎರಡು ಗಂಟೆಗಳ ಬಳಿಕ ಮೋದಿ ಪ್ರಯಾಣ ಮುಂದುವರಿಸಿದ್ದಾರೆ.
ವಿಶೇಷ ನಮೋ ಥಾಲಿ
ಮೋದಿಗೆ ಕಾರ್ಯಕ್ರಮದಲ್ಲಿ ವಿಶೇಷವಾದ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಶೆಫ್ ಕಿರಣ್ ವರ್ವ ವಿಶೇಷವಾದ ‘ನಮೋ ಥಾಲಿ’ ಸಿದ್ಧಪಡಿಸಲಿದ್ದಾರೆ. ಮೋದಿ ಹುಟ್ಟುಹಬ್ಬದ ದಿನ ಅವರ ತಾಯಿ ಮಾಡಿದ್ದ ಅಡುಗೆಗಳಿಂದ ಪ್ರೇರಿತವಾಗಿ ಈ ಥಾಲಿ ಸಿದ್ಧಪಡಿಸ ಲಾಗುತ್ತಿದ್ದು, ಇದರಲ್ಲಿ ಮೇಥಿ ಥೇಪ್ಲಾ, ಸಮೋಸ ಜತೆಗೆ ಪುದೀನಾ ಚಟ್ನಿ, ಕಚೋರಿ ಜತೆಗೆ ಹುಣಸೆ ಚಟ್ನಿ, ದಾಲ್, ಕಿಚಡಿ ಮತ್ತು ಖಾಂಡ್ವಿ ಇರಲಿದೆ. ಕ್ಯಾರೆಟ್ ಹಲ್ವಾ, ರಸಮಲೈ ಶ್ರೀಖಂಡ್, ಗುಲಾಬ್ ಜಾಮೂನ್ ಮತ್ತು ಪಾಯಸ ಸಿಹಿ ಖಾದ್ಯ ಇರಲಿದೆ ಎನ್ನಲಾಗಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?