ಸ್ನೇಹಕ್ಕೆ ಸ್ನೇಹ..ಪ್ರೀತಿಗೆ ಪ್ರೀತಿ... ಮೋದಿ-ಟ್ರಂಪ್ ಜುಗಲ್‌ಬಂದಿ, ಪಾಕ್‌ಗೆ ಫಜೀತಿ



ಹೂಸ್ಟನ್‌[ಸೆ.22]: ಹೂಸ್ಟನ್‌ನ ಎನ್‌ಆರ್‌ಜಿ ಫುಟ್ಬಾಲ್‌ ಮೈದಾನದಲ್ಲಿ ಎಲ್ಲಿ ನೋಡಿದರಲ್ಲಿ ಭಾರತದ ತ್ರಿವರ್ಣ ಧ್ವಜಗಳು.. ಮೋದಿ ಮೋದಿ ಘೋಷಣೆ..ಜನಗಣ ಮನ .. ಇದಕ್ಕೆಲ್ಲ ಕಾರಣ ಅಮೆರಿಕದ ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ‘ಹೌಡಿ-ಮೋದಿ’ ಸಮಾವೇಶ.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ರಾತ್ರಿ 10.35ಕ್ಕೆ ಮೋದಿ ಭಾಷಣ ಆರಂಭಿಸಿದರು.ಮತ್ತೆ, ಮತ್ತೆ ಟ್ರಂಪ್ ಅವರನ್ನು ಭೇಟಿಯಾಗುವ ಅವಕಾಶ ನನಗೆ ಸಿಗುತ್ತಿದೆ. ಟ್ರಂಪ್ ಸ್ನೇಹ ಸ್ವಭಾವ, ಸಾಮರ್ಥ್ಯ ವಿವರಿಸಲು ಅಸಾಧ್ಯ ಎಂದು ಮೋದಿ ಟ್ರಂಪ್ ಅವರ ಗುಣಗಾನ ಮಾಡಿದರು.


ಟ್ರಂಪ್ ಆಡಳಿತದಲ್ಲಿ ಅಮೆರಿಕದ ಆರ್ಥಿಕತೆ ಈಗ ಮತ್ತಷ್ಟು ಸದೃಢವಾಗಿದೆ ಎಂದು ಕೊಂಡಾಡಿದ ಮೋದಿ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂಬ ಘೋಷಣೆಯನ್ನು ತೇಲಿಬಿಟ್ಟರು.

ನಾನು ಮೊದಲ ಬಾರಿಗೆ ಟ್ರಂಪ್ ಭೇಟಿಯಾದಾಗ ಭಾರತ ನಿಜವಾದ ಸ್ನೇಹಿತ ಎಂದಿದ್ದರು. ಎರಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿದ್ದೇವೆ. ನಾವಿಬ್ಬರೂ ಮನುಷ್ಯತ್ವದ ಸಂಬಂಧಗಳನ್ನು ಬೆಸೆಯಲು ಸದಾ ಕೈಜೋಡಿಸುತ್ತೇವೆ ಎಂದು ಮೋದಿ ಹೇಳಿದರು. ಭಾರತೀಯರನ್ನು ಇದ್ದೇಶಿಸಿ ಮೋದಿ ಟ್ರಂಪ್ ಭಾಷಣದ ನಂತರ ಮಾತನಾಡಲಿದ್ದಾರೆ.
ಉಗ್ರವಾದದ ವಿರುದ್ಧ ಸಮರ: ಅಮೆರಿಕ ನೆಲದಲ್ಲಿ, ಟ್ರಂಪ್ ಸಮ್ಮುಖದಲ್ಲಿ ಮೊದಲ ಬಾರಿ ಭಯೋತ್ಪಾದನೆ ವಿರುದ್ಧ ಕಟುಶಬ್ದಗಳಲ್ಲಿ ವಾಗ್ದಾಳಿ ನಡೆಸಿದ ಮೋದಿ, ತಮ್ಮ ದೇಶವನ್ನೇ ಸುಧಾರಿಸಲು ಆಗದೇ ಇರುವವರು ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ತೆರವುಗೊಳಿಸಿದ ಭಾರತದ ಆಂತರಿಕ ನಿರ್ಧಾರವನ್ನು ಟೀಕಿಸುತ್ತಿದ್ದಾರೆ. ಅಮೆರಿಕದ 9/11 ದುರಂತವಿರಲಿ, ಮುಂಬೈನ 26/11 ದುರಂತವಿರಲಿ ಅದರ ಹಿಂದಿರುವುದು ಒಂದೇ ದೇಶ ಎಂದು ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೆ ತರಾಟೆಗೆ ತೆಗೆದುಕೊಂಡರು. ಭಾರತ – ಅಮೆರಿಕ ಎರಡೂ ದೇಶಗಳ ಹೋರಾಟ ಭಯೋತ್ಪಾದನೆ ಹಾಗೂ ಅದರ ಬೆಂಬಲಿಗರ ವಿರುದ್ಧ ಎಂದು ಮೋದಿ ಹೇಳಿದರು.
ಸುಧಾರಣೆ ಪರ್ವ: ಭಾರತದಲ್ಲಿ ಹಲವು ಭಾಷೆಗಳು ಕೋಟ್ಯಂತರ ಜನರ ಮಾತೃಭಾಷೆಗಳಾಗಿವೆ. ವಿವಿಧತೆಯಲ್ಲಿ ಏಕತೆಯೆ ನಮ್ಮ ವಿಶೇಷ. ಇದೇ ನಮ್ಮ ಪ್ರೇರಣೆ. ಇದೇ ನಮ್ಮ ಶಕ್ತಿ. ನಾವು ಎಲ್ಲೇ ಹೋದರು ನಮ್ಮ ಸಂಸ್ಕಾರವನ್ನು ಜತೆಗೆ ತೆಗೆದುಕೊಂಡು ಹೋಗುತ್ತೇವೆ. ಇಲ್ಲಿರುವ 50 ಸಾವಿರ ಜನ ನಮ್ಮ ಭಾರತದ ಮಹಾನ್ ಪ್ರತಿನಿಧಿಗಳು. ಈ ಕಾರ್ಯಕ್ರಮದ ಹೆಸರು ಹೌಡಿ ಮೋದಿ. ಆದರೆ ಮೋದಿ ಒಬ್ಬರೇ ಇಲ್ಲ. ನಾನು 130 ಕೋಟಿ ಜನರಿಗೆ ಕೆಲಸ ಮಾಡುವ ಸಾಮಾನ್ಯ ಕೆಲಸಗಾರ ಎಂದರು.
2019ರ ಚುನಾವಣೆ ಭಾರತದ ಪ್ರಜಾಪ್ರಭುತ್ವ ವನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿತು. ಅಮೆರಿಕದ ಎರಡರಷ್ಟು ಜನಸಂಖ್ಯೆ ಈ ಚುನಾವಣೆಯಲ್ಲಿ ಭಾಗಿಯಾಗಿತ್ತು. 8 ಕೋಟಿ ಯುವಶಕ್ತಿ ಮೊದಲ ಬಾರಿ ಮತ ಚಲಾಯಿಸಿತು. ಭಾರತದ ಇತಿಹಾಸದಲ್ಲಿ ಅತೀ ಹೆಚ್ಚು ಮಹಿಳೆಯರು ಮತ ಚಲಾಯಿಸಿದರು. ಅತೀ ಹೆಚ್ಚಿನ ಮಹಿಳೆಯರು ಸಂಸತ್​ಗೆ ಆಯ್ಕೆ ಕೂಡ ಆದರು. 6 ದಶಕಗಳ ನಂತರ ಪೂರ್ತಿ ಬಹುಮತದ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರ ಮತ್ತೊಮ್ಮೆ ಹೆಚ್ಚು ಸಂಖ್ಯೆ ಪಡೆದು ಅಧಿಕಾರಕ್ಕೇರಿತು. ಇದು ಮೋದಿಯಿಂದ ಆಗಿದ್ದಲ್ಲ. ಹಿಂದುಸ್ತಾನದ ಎಲ್ಲರಿಂದ ಸಾಧಿಸಿದ್ದು.
ಸಂಕಲ್ಪವೇ ಸಿದ್ಧಿ: ಧೈರ್ಯ ನಮ್ಮ ಪರಿಚಯದ ಗುರುತು. ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಮ್ಮ ದೊಡ್ಡ ಮಂತ್ರ ಸಬ್ ಕಾ ಸಾತ್ , ಸಬ್ ಕಾ ವಿಕಾಸ್. ಸಂಕಲ್ಪವೇ ಸಿದ್ಧಿ. ನಮ್ಮ ಸಂಕಲ್ಪವಿರುವುದು ಹೊಸ ಭಾರತದಲ್ಲಿ. ಆ ಕನಸನ್ನು ಪೂರ್ಣಗೊಳಿಸಲು ನಾವು ಹಗಲು ರಾತ್ರಿ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಇತರರೊಂದಿಗೆ ಅಲ್ಲ ನಮ್ಮೊಂದಿಗೆ ಹೋರಾಡುತ್ತಿದ್ದೇವೆ. ನಾವು ನಮ್ಮನ್ನು ಬದಲಿಸಿಕೊಳ್ಳುತ್ತಿದ್ದೇವೆ ಎಂದರು.
ಭ್ರಷ್ಟಾಚಾರಕ್ಕೆ ಕಡಿವಾಣ: ಭಷ್ಟಾಚಾರ ನಿಮೂಲನೆಗೆ ಅನೇಕ ಹೆಜ್ಜೆಗಳನ್ನಿಟ್ಟಿದ್ದೇವೆ. ಎನ್​ಆರ್​ಸಿ ಮೂಲಕ ಭಾರತದಲ್ಲಿದ್ದ 18 ಲಕ್ಷ ಅಕ್ರಮ ವಲಸಿಗರಿಗೆ ವಿದಾಯ ಹೇಳಿದ್ದೇವೆ. ಇವರಿಂದ 20 ಬಿಲಿಯನ್ ಡಾಲರ್​ಗಳಷ್ಟು ನಷ್ಟವಾಗುತ್ತಿತ್ತು.
ಕಾಶ್ಮೀರ ನಿರ್ಧಾರ ಸಮರ್ಥನೆ: ಒಬ್ಬ ಭಾರತೀಯರನ್ನೂ ವಿಕಾಸದಿಂದ ದೂರವಿಡಲು ನಾವು ಸಿದ್ಧರಿಲ್ಲ. 370ನೇ ವಿಧಿ ಜಮ್ಮು ಕಾಶ್ಮೀರ ಹಾಗೂ ಲಡಾಖ್​ನ ಜನರನ್ನು ಅಭಿವೃದ್ಧಿ ಹಾಗೂ ಸಮಾನ ಅಧಿಕಾರದಿಂದ ವಂಚಿತರನ್ನಾಗಿಸಿತ್ತು. ಇದರ ಲಾಭವನ್ನು ಉಗ್ರವಾದ ಬೆಳೆಸುವ ಜನರು ಉಪಯೋಗಿಸಿಕೊಳ್ಳುತ್ತಿದ್ದರು. ಈಗ ಅಲ್ಲಿನ ಎಲ್ಲ ಜನರು ಭಾರತದೊಂದಿಗೆ ಬೆರೆತಿದ್ದಾರೆ. ಅಲ್ಲಿನ ಪ್ರತಿಯೊಬ್ಬರ ಜತೆ ಆಗುತ್ತಿದ್ದ ಬೇಧಭಾವ ಈಗ ಅಂತ್ಯವಾಗಿದೆ. ಸಂಸತ್​ನಲ್ಲಿ ಇದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳಾದವು. ಇದು ವಿಶ್ವದಾದ್ಯಂತ ಪ್ರಸಾರವಾಯಿತು. ನಮಗೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದಿದ್ದರೂ ಎರಡೂ ಸದನಗಳಲ್ಲಿ ಈ ಮಸೂದೆಯನ್ನು ಮುಕ್ಕಾಲುಪಾಲು ಸಂಸದರು ಬೆಂಬಲಿಸಿದರು ಎಂದು ಮೋದಿ ಹೇಳಿದರು.
ಹೂಡಿಕೆ ಮಾತುಕತೆ: ಭಾರತದಲ್ಲಿ ವಿದೇಶಿ ಹೂಡಿಕೆಗೆ ಸಂಬಂಧ ಇನ್ನೆರಡು ದಿನಗಳಲ್ಲಿ ಟ್ರಂಪ್ ಜತೆ ಮಾತುಕತೆ ನಡೆಸುವೆ. ಉತ್ತಮ ಭವಿಷ್ಯಕ್ಕಾಗಿ ನಮ್ಮ ಹೆಜ್ಜೆ ಇನ್ನು ವೇಗವಾಗಿ ನಡೆಯಲಿವೆ. ನೀವು ನಿಮ್ಮ ನೆಲದಿಂದ ದೂರವಿರಬಹದು. ಆದರೆ ನಿಮ್ಮ ಸರ್ಕಾರ ನಿಮ್ಮಿಂದ ದೂರವಿಲ್ಲ. ವಿದೇಶದಲ್ಲಿರುವ ಭಾರತದ ವಿದೇಶಾಂಗ ಕಚೇರಿಗಳು ಈಗ ಕೇವಲ ಕಚೇರಿಗಳಾಗಿಲ್ಲ. ವಿದೇಶಗಳಲ್ಲಿರುವ ಎಲ್ಲ ಜನರ ಸೌಕರ್ಯ, ಸುರಕ್ಷತೆ ನೋಡಿಕೊಳ್ಳುತ್ತಿವೆ ಎಂದರು.
ಕ್ರೀಡಾಂಗಣ ಸುತ್ತು
ಮೋದಿ ಭಾಷಣ ಮುಗಿಯುತ್ತಲೇ ಟ್ರಂಪ್ ಅವರ ಕೈಹಿಡಿದು ಇಡೀ ಕ್ರೀಡಾಂಗಣವನ್ನು ಸುತ್ತುಹಾಕಿದರು.
ಅಮೆರಿಕದಲ್ಲೂ ಸ್ವಚ್ಛತೆ ಮಂತ್ರ
ಹ್ಯೂಸ್ಟನ್ ಏರ್​ಪೋರ್ಟ್​ನಲ್ಲಿ ತಮಗೆ ನೀಡಿದ ಹೂಗುಚ್ಛದಿಂದ ಕೆಳಕ್ಕೆ ಬಿದ್ದ ಹೂವನ್ನು ತಾವೇ ಖುದ್ದು ಎತ್ತಿದ ಮೋದಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಮೋದಿ ಅಭಿವೃದ್ಧಿ ಹರಿಕಾರ
ಹ್ಯೂಸ್ಟನ್: ಪ್ರಧಾನಿ ಮೋದಿಯನ್ನು ಭಾರತದ ಅಭಿವೃದ್ಧಿಯ ಹರಿಕಾರರೆಂದು ಗುಣಗಾನ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ- ಭಾರತದ ಬಾಂಧವ್ಯ ಹಿಂದೆಂದಿಗಿಂತಲೂ ಸದೃಢ ಎಂದರು. ಉಭಯ ದೇಶಗಳ ಅಭ್ಯುದಯಕ್ಕೆ ನಮ್ಮ ಮೈತ್ರಿಯನ್ನು ಹೊಸ ಸ್ತರಕ್ಕೆ ಕೊಂಡೊಯ್ಯುವುದಾಗಿ ಹೇಳಿದರು. ಇಸ್ಲಾಮಿಕ್ ಉಗ್ರವಾದಕ್ಕೆ ಎಚ್ಚರಿಕೆ ನೀಡಿದ ಟ್ರಂಪ್, ಮುಗ್ಧ ಜನರ ರಕ್ಷಣೆಗಾಗಿ ಭಯೋತ್ಪಾದನೆ ವಿರುದ್ಧ ಅಮೆರಿಕ ಮತ್ತು ಭಾರತ ಒಟ್ಟಾಗಿ ಹೋರಾಟ ಮಾಡಲಿವೆ. ಗಡಿ ಭದ್ರತೆ ಎರಡೂ ದೇಶಗಳಿಗೂ ಮುಖ್ಯ ಎಂದರು. ಮುಂದಿನ ತಿಂಗಳು ಮುಂಬೈನಲ್ಲಿ ಎನ್​ಬಿಎ ಬ್ಯಾಸ್ಕೆಟ್ ಬಾಲ್ ಟೂರ್ನಿಮೆಂಟ್ ನಡೆಯಲಿದೆ. ಭಾರತ ಮೊದಲ ಬಾರಿಗೆ ಇದನ್ನು ಆಯೋಜಿಸುತ್ತಿದ್ದು, ಪ್ರಧಾನಿ ಮೋದಿ ಆಹ್ವಾನ ನೀಡಿದರೆ ವೀಕ್ಷಣೆಗೆ ಬರುವೆ ಎಂದು ಭಾರತಕ್ಕೆ ಎರಡನೇ ಬಾರಿಗೆ ಭೇಟಿ ನೀಡುವ ಸುಳಿವನ್ನೂ ನೀಡಿದರು.
ಹೌಡಿ ಮೋದಿ ಎಲ್ಲ ಚೆನ್ನಾಗಿದೆ!
ನೀವು ಕೇಳುತ್ತೀರಿ ಹೌಡಿ ಮೋದಿ? ಅದಕ್ಕೆ ನನ್ನ ಉತ್ತರ ಭಾರತದಲ್ಲಿ ‘ಎಲ್ಲಾ ಚೆನ್ನಾಗಿದೆ’ ಎಂದು ಕನ್ನಡದಲ್ಲೂ ಹೇಳಿದ ಮೋದಿ, ಬಳಿಕ ಟ್ರಂಪ್​ಗೆ ಅರ್ಥವಾಗುವಂತೆ ಎವರಿಥಿಂಗ್ ಈಸ್ ಫೈನ್ ಇನ್ ಇಂಡಿಯಾ ಎಂದರು.
ರಾಷ್ಟ್ರಗೀತೆ ಹಾಡಿದ ಸ್ಪರ್ಶ್
ವಿರಳವಾದ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿರುವ ಭಾರತೀಯ ಮೂಲದ ಸ್ಪರ್ಶ್ ಷಾ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿ ಮೋಡಿ ಮಾಡಿದರು. ಒಸ್ಟೆಜೆನೆಸಿಸ್ ಇಮ್ರ್ಫೆಕ್ಟಾ ಎನ್ನುವ ಸಮಸ್ಯೆಯಿಂದ ಬಳಲುತ್ತಿರುವ 16 ವರ್ಷದ ಸ್ಪರ್ಶ್ ಷಾನ ಮೂಳೆಗಳು ಗಾಜಿನಷ್ಟು ನಾಜೂಕು. ಈಗಾಗಲೇ 130ಕ್ಕೂ ಹೆಚ್ಚು ಬಾರಿ ಮೂಳೆ ಮುರಿದುಕೊಂಡಿರುವ ಈತ ರ್ಯಾಪರ್ ಆಗಿ ಗಾಯಕ, ಗೀತರಚನೆಕಾರ ಮತ್ತು ಪ್ರೇರಣಾ ಭಾಷಣ ಮಾಡುವವನಾಗಿ ಅಮೆರಿಕದಲ್ಲಿ ಖ್ಯಾತಿ ಪಡೆದಿದ್ದಾನೆ.

ಹೌಡಿ ಮೋದಿಗೆ ಹ್ಯೂಸ್ಟನ್ ನಮೋ

ಹ್ಯೂಸ್ಟನ್: ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯನ್ನು ಕಾಶ್ಮೀರಿ ಪಂಡಿತ ಸಮುದಾಯ ಮತ್ತು ಸಿಖ್ ಸಮುದಾಯದ ಪ್ರತಿನಿಧಿಗಳು ಭೇಟಿಯಾಗಿದ್ದರು. ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯ ಐತಿಹಾಸಿಕ ನಿರ್ಧಾರ, ಖಲಿಸ್ತಾನ್ ಹೋರಾಟದಲ್ಲಿ ಭಾಗಿಯಾಗಿ ಈಗ ವಿದೇಶದಲ್ಲಿ ನೆಲೆಸಿರುವ 312 ಸಿಖ್ಖರ ಹೆಸರನ್ನು ಕಪು್ಪಪ್ಟಟಿಯಿಂದ ತೆಗೆದುಹಾಕಿರುವುದಕ್ಕೆ ಉಭಯ ಸಮುದಾಯಗಳ ಮುಖಂಡರು ಮೋದಿಗೆ ಧನ್ಯವಾದ ಸಲ್ಲಿಸಿದರು.
ಕಾಶ್ಮೀರಕ್ಕೆ ಪಂಡಿತರನ್ನು ವಾಪಾಸಾಗಿಲು ಮತ್ತು ಮರುಸಂಘಟಿಸಲು ಸಮಗ್ರ ಯೋಜನೆ ಸಿದ್ಧಪಡಿಸಲು ಕಾಶ್ಮೀರಿ ಪಂಡಿತರನ್ನೊಳಗೊಂಡ ತಜ್ಞ ಸಮಿತಿಯನ್ನು ರೂಪಿಸಬೇಕೆಂದು ಕಾಶ್ಮೀರಿ ಪಂಡಿತರು ಮನವಿ ಮಾಡಿದರೆ, ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಗುರುನಾನಕ್ ದೇವ್’ರ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಸಿಖ್ ಮುಖಂಡರು ಕೋರಿದರು. ನಂತರ ಟ್ವೀಟ್ ಮಾಡಿದ ಮೋದಿ, ಸಣ್ಣ ಸಮುದಾಯವಾದ ಪಂಡಿತರು ಬಹಳಷ್ಟು ನೊಂದಿದ್ದಾರೆ. ಅವರನ್ನೂ ಸೇರಿಸಿಕೊಂಡು ನವ ಕಾಶ್ಮೀರ ನಿರ್ವಿುಸೋಣ ಎಂದಿದ್ದಾರೆ. ಸಿಖ್ಖರಿಗೆ ಅಚ್ಚರಿಯ ಸುದ್ದಿಯೊಂದು ಇದೆ. ಇದಕ್ಕಾಗಿ ಕಾಯಬೇಕೆಂದು ಮೋದಿ ತಿಳಿಸಿದ್ದಾರೆ.
ಹೌಡಿ ಮೋದಿ ಆಯೋಜಕ ಜುಗಲ್ ಕಿಶೋರ್ ಮಲಾನಿ ಬೀದರ್​ನವರು!
ಅಮೆರಿಕದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದ ಆಯೋಜನೆಗೆ ವಿಶೇಷ ತಂಡ ರಚಿಸಲಾಗಿತ್ತು. ಇದರ ಅಧ್ಯಕ್ಷ ಜುಗಲ್ ಕಿಶೋರ್ ಮಲಾನಿ ಕರ್ನಾಟಕದ ಬೀದರ್​ನವರು. ಹೀಗಾಗಿ ಬೀದರ್​ನಲ್ಲಿರುವ ಇವರ ನಿವಾಸದಲ್ಲೂ ಸಂಭ್ರಮ ಮನೆಮಾಡಿತ್ತು. ಇವರ ಅಣ್ಣ, ಅತ್ತಿಗೆ ಕಾರ್ಯಕ್ರಮ ವೀಕ್ಷಿಸಿದರು. ಸಹೋದರ ಶಿವರತ್ನ ಮಲಾನಿ ಪ್ರತಿಕ್ರಿಯಿಸಿದ್ದು, ಕಿಶೋರ್ ಕೆಳಮಟ್ಟದಿಂದ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದು ಖುಷಿ ತಂದಿದೆ. ಅಲ್ಲದೆ ಹೊರದೇಶದಲ್ಲಿದ್ದರೂ ಕಿಶೋರ್ ನಮ್ಮ ನೆಲದ ಸಂಸ್ಕೃತಿಯನ್ನು ಮರೆತಿಲ್ಲ. ಸೋದರ ಎನ್ನುವುದಕ್ಕಿಂತಲೂ ಮಗನ ರೀತಿಯಲ್ಲಿ ಸಾಕಿದ್ದೆ. ಮೋದಿಯನ್ನು ನೋಡಲು ಅಲ್ಲಿನ ಜನರಲ್ಲಿದ್ದ ಉತ್ಸಾಹ, ಕಾತುರ, ಸಂಭ್ರಮ ನೋಡಿ ಹೆಮ್ಮೆಯೆನಿಸಿತು. ಇಂತಹ ಮಹತ್ವಪೂರ್ಣ ಕಾರ್ಯಕ್ರಮದ ಆಯೋಜನೆಯಲ್ಲಿ ಕಿಶೋರ್ ಮಹತ್ವದ ಸ್ಥಾನ ಪಡೆದಿದ್ದಾನೆ ಎನ್ನುವುದೇ ಹೆಮ್ಮೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಸ್ವಚ್ಛತೆ ಮಂತ್ರ ಪಾಲನೆಗೆ ಅಪಾರ ಮೆಚ್ಚುಗೆ
2014ರ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸ್ವಚ್ಛಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ ವಿದೇಶಗಳಿಗೆ ತೆರಳಿದಾಗಲೂ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ. ಹ್ಯೂಸ್ಟನ್​ನ ಜಾರ್ಜ್ ಬುಷ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂದಿಳಿದ ಮೋದಿಗೆ ಅಮೆರಿಕದ ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ ಹೂವೊಂದು ಗುಚ್ಛದಿಂದ ಕೆಳಗೆ ಬಿತ್ತು. ಮೋದಿ ಆ ಹೂವನ್ನು ಎತ್ತಿಕೊಂಡರು. ಈ ವಿನಮ್ರ ನಡೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗುವುದರ ಜತೆಗೆ ಸ್ವಚ್ಛತೆ ಬಗ್ಗೆ ಮೋದಿ ತೋರಿದ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ದ್ರವೀಕೃತ ನೈಸರ್ಗಿಕ ಅನಿಲ ಖರೀದಿಗೆ ಒಪ್ಪಂದ
ಅಮೆರಿಕದ ಟೆಲ್ಲೂರಿಯನ್ ಕಂಪನಿಯಿಂದ ವಾರ್ಷಿಕ ಐದು ಮಿಲಿಯನ್ ಟನ್ ದ್ರವೀಕೃತ ನೈಸರ್ಗಿಕ ಅನಿಲ ಖರೀದಿಸಲು ಭಾರತದ ಪೆಟ್ರೋನೆಟ್ ಎಲ್​ಎನ್​ಜಿ ಒಪ್ಪಂದ ಮಾಡಿಕೊಂಡಿದೆ. ಟೆಲ್ಲೂರಿಯನ್​ನ ಡ್ರಿಫ್ಟ್ ವುಡ್ ಪ್ರಾಜೆಕ್ಟ್ ನಲ್ಲಿ ಈಕ್ವಿಟಿಯಲ್ಲಿ ಪೆಟ್ರೋನೆಟ್ ಹೂಡಿಕೆ ಮಾಡಲಿದೆ. ಪ್ರಾಜೆಕ್ಟ್​ನ ಅಂತ್ಯದವರೆಗೂ ವಾರ್ಷಿಕ 5 ಮಿಲಿಯನ್ ಟನ್ ತೈಲ ಪೂರೈಕೆ ಒಪ್ಪಂದವಾಗಿದ್ದು, ಇದಕ್ಕಾಗಿ 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ ಎನ್ನಲಾಗಿದೆ. 2020ರ ಮಾ.31ಕ್ಕೆ ಈ ಒಪ್ಪಂದ ಅಂತಿಮ ರೂಪ ಪಡೆದುಕೊಳ್ಳಲಿದೆ.
ಗುಡ್ ಮಾರ್ನಿಂಗ್ ಅಮೆರಿಕ!
ಕಾರ್ಯಕ್ರಮದ ಮೊದಲಿಗೆ ಡೊನಾಲ್ಡ್ ಟ್ರಂಪ್​ರನ್ನು ಭಾಷಣಕ್ಕೆ ಆಹ್ವಾನಿಸಿದ ಮೋದಿ, ಜಾಗತಿಕ ನಾಯಕನೆಂದು ಬಣ್ಣಿಸಿದರು. ಅಮೆರಿಕದ ಆರ್ಥಿಕತೆಯನ್ನು ಉನ್ನತಕ್ಕೆ ಕೊಂಡೊಯ್ದಿದ್ದಾರೆ ಎಂದರು. ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್​ಗೆ ಶುಭ ಕೋರಿದ ಮೋದಿ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂದರು. ರಾತ್ರಿ 9:40ಕ್ಕೆ (ಭಾರತೀಯ ಕಾಲಮಾನ) ವೇದಿಕೆಗೆ ಬಂದ ಮೋದಿಗೆ ಭಾರತ-ಹೂಸ್ಟನ್ ಸಂಬಂಧದ ಸಂಕೇತವಾಗಿ ಹೂಸ್ಟನ್​ನ ಮೇಯರ್ ಸಿಲ್ವೆಸ್ಟರ್ ಟರ್ನರ್ ‘ಕೀ ಟು ಹೂಸ್ಟನ್’ ಉಡುಗೊರೆ ನೀಡಿ ಸ್ವಾಗತಿಸಿದರು. ರಾತ್ರಿ 10.28ಕ್ಕೆ ಅರ್ಧಗಂಟೆ ತಡವಾಗಿ ಎನ್​ಆರ್​ಜಿ ಸ್ಟೇಡಿಯಂಗೆ ಆಗಮಿಸಿದ ಡೊನಾಲ್ಡ್ ಟ್ರಂಪ್​ರನ್ನು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ವಾಗತಿಸಿದರು.
ಟ್ರಂಪ್ ಭಾಷಣದ ಮುಖ್ಯಾಂಶ
  • ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಮತ್ತು ಕಳೆದ ವಾರ 69ನೇ ಜನ್ಮದಿನ ಆಚರಿಸಿಕೊಂಡ ಮೋದಿಗೆ ಶುಭಾಶಯ
  • ಅತ್ಯಂತ ಕಡಿಮೆ ಅವಧಿಯಲ್ಲಿ ಜನಪರ ಯೋಜನೆಗಳ ಮೂಲಕ 30 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ ಮೋದಿ.
  • ಭಾರತ- ಅಮೆರಿಕನ್ನರು ಔಷಧದ ವಿಯಷದಲ್ಲಿ ನಿಷ್ಣಾತರು. ಈ ವಲಯದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದಾರೆ.
  • ಭಾರತಕ್ಕೆ ರಫ್ತು ಹೆಚ್ಚಿಸಲು ಶ್ವೇತಭವನ ಸಕಲ ಪ್ರಯತ್ನ ಮಾಡುತ್ತಿದೆ.
  • ಹೌಡಿ ಮೋದಿ’ ಐತಿಹಾಸಿಕ ಕಾರ್ಯಕ್ರಮ, ಈ ವೇದಿಕೆ ಮೂಲಕ ಉಭಯ ದೇಶಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ.
  • ಸುಮಾರು 25 ನಿಮಿಷ ಭಾಷಣ ಮಾಡಿದ ಟ್ರಂಪ್.

ಅಮೆರಿಕ ನಾಯಕರ ಉಪಸ್ಥಿತಿ
ಪ್ರಧಾನಿ ಮೋದಿ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಭಾರಿ ಸಂಖ್ಯೆಯಲ್ಲಿ ಅಮೆರಿಕದ ರಾಜಕೀಯ ನಾಯಕರೂ ಆಗಮಿಸಿದ್ದರು. ಗವರ್ನರ್, ಸಂಸತ್ ಸದಸ್ಯರು ಸೇರಿ 60ಕ್ಕೂ ಅಧಿಕ ಡೆಮಾಕ್ರಟಿಕ್, ರಿಪಬ್ಲಿಕನ್ ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೌಡಿಯಲ್ಲಿ ಮೋದಿ ಮೇನಿಯ
ಪ್ರಧಾನಿ ಮೋದಿಯ ಬಹುನಿರೀಕ್ಷಿತ ಕಾರ್ಯಕ್ರಮ ‘ಹೌಡಿ ಮೋದಿ’ ಭಾನುವಾರ ಟೆಕ್ಸಾಸ್​ನ ಹ್ಯೂಸ್ಟನ್​ನಲ್ಲಿ ಅದ್ದೂರಿಯಾಗಿ ನೆರವೇರಿತು. ಭಾರಿ ಜನಸಮೂಹ, ಸಂಭ್ರಮಾಚರಣೆ, ಡೋಲು ಕುಣಿತ, ದಾಂಡಿಯಾ ಮುಂತಾದ ಭಾರತೀಯ ಸಂಸ್ಕೃತಿಯ ಅನಾವರಣಕ್ಕೆ ಎನ್​ಆರ್​ಜಿ ಸ್ಟೇಡಿಯಂ ಸಾಕ್ಷಿಯಾಯಿತು. ಭಾನುವಾರ ಬೆಳಗ್ಗೆ 6 ಗಂಟೆಗೇ ಎನ್​ಆರ್​ಜಿ ಸ್ಟೇಡಿಯಂನ ಬಾಗಿಲು ತೆರೆಯುತ್ತಿದ್ದಂತೆ ಜನರು ತಂಡೋಪತಂಡವಾಗಿ ಬರಲು ಆರಂಭಿಸಿದ್ದರು. ಬೆಳಗ್ಗೆ 9 ಗಂಟೆೆಗೆ 50 ಸಾವಿರ ಜನರು ಜಮಾಯಿಸಿದ್ದರು. ನಮೋ ಮೋದಿ ಘೋಷಣೆ ಸ್ಟೇಡಿಯಂನಲ್ಲಿ ಅನುರಣಿಸುತ್ತಿದ್ದರೆ, ಡೋಲಿನ ಸದ್ದು ಸಂಭ್ರಮವನ್ನು ಹೆಚ್ಚಿಸಿತು.
ಸಾಂಸ್ಕೃತಿಕ ಕಾರ್ಯಕ್ರಮ ಮೆರುಗು
ಪ್ರಧಾನಿ ಮೋದಿ ಭಾಷಣಕ್ಕೂ ಮೊದಲು 27 ತಂಡಗಳ 400 ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಿನ್​ಸಿನಾಟಿ ತಂಡದ ಕೀರ್ತನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭರತನಾಟ್ಯ, ಒಡಿಸ್ಸಿ, ಮೋಹಿನಿಆಟ್ಟಂ ಪ್ರದರ್ಶನ ನಡೆಯಿತು. ಅಮೆರಿಕದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಕಲಾವಿದರು ಪ್ರದರ್ಶನ ನೀಡಿದರು. ಇದರ ಹಿನ್ನೆಲೆಯಲ್ಲಿ ಭಾರತ ವಿವಿಧ ಪ್ರದೇಶಗಳ ಚಿತ್ರಗಳನ್ನು ಪ್ರದರ್ಶಿಸಿದ್ದು, ಕಾರ್ಯಕ್ರಮದ ಮೆರುಗು ನೀಡಿತು.
ಹೌಡಿಯಲ್ಲೂ ಯೋಗಾಯೋಗ
ಮೋದಿ ಪ್ರಧಾನಿಯಾದಾಗಿನಿಂದಲೂ ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ವರ್ಷ ಫಿಟ್ ಇಂಡಿಯಾ ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದಾರೆ. ಮೋದಿಯ ಯೋಗ ಪ್ರೀತಿ ‘ಹೌಡಿ ಮೋದಿ’ಯಲ್ಲೂ ಪ್ರತಿಫಲಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಂಡವೊಂದು ಯೋಗದ ವಿವಿಧ ಭಂಗಿಗಳ ಪ್ರದರ್ಶನ ಮಾಡಿತು.
ಸಿಇಒಗಳ ಜತೆ ಮಾತುಕತೆ 
ವಿದ್ಯುಚ್ಛಕ್ತಿಯ ಹಬ್ ಆಗಿರುವ ಹ್ಯೂಸ್ಟನ್​ನಲ್ಲಿ ವಿದ್ಯುತ್ ಕಂಪನಿಗಳ ಸಿಇಒಗಳನ್ನು ಮೋದಿ ಶನಿವಾರ ಭೇಟಿಯಾಗಿದ್ದರು. ವಿದ್ಯುಚ್ಛಕ್ತಿ ಕ್ಷೇತ್ರದಲ್ಲಿ ಅಮೆರಿಕ ಮತ್ತು ಭಾರತ ನಡುವೆ ಪರಸ್ಪರ ಹೂಡಿಕೆ ಅವಕಾಶಗಳನ್ನು ವಿಸ್ತರಿಸುವ ಮತ್ತು ವಿದ್ಯುತ್ ಭದ್ರತೆ ಬಗ್ಗೆ ಮಾತುಕತೆ ನಡೆಸಿದರು. ಹೋಟೆಲ್ ಪೋಸ್ಟ್ ಓಕ್​ನಲ್ಲಿ ನಡೆದ ಈ ಸಭೆಯಲ್ಲಿ 17 ಸಿಇಒಗಳು ಭಾಗವಹಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಹ್ಯೂಸ್ಟನ್​ಗೆ ಬಂದು ಎನರ್ಜಿ ಬಗ್ಗೆ ಮಾತನಾಡಿಲ್ಲ ಎನ್ನುವುದು ಅಸಾಧ್ಯವಾದ ಮಾತು. ಸಿಇಒಗಳೊಂದಿಗೆ ಹೊಸ ಅವಕಾಶಗಳನ್ನು ಪಡೆದುಕೊಳ್ಳುವ ಸಂಬಂಧ ಮಾತುಕತೆಯಾಗಿದೆ ಎಂದಿದ್ದಾರೆ.










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?