ಸಿಯಾಚಿನ್ ಶೀಘ್ರದಲ್ಲೇ ಪ್ರವಾಸಿ ತಾಣ.....?


ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್​ಗೆ ಭೇಟಿ ನೀಡಲು ಸಾಮಾನ್ಯ ಜನರಿಗೂ ಅವಕಾಶ ನೀಡುವ ಬಗ್ಗೆ ಸೇನೆ ಚಿಂತನೆ ನಡೆಸಿದೆ. ಜಮ್ಮು-ಕಾಶ್ಮೀರದಿಂದ ಲಡಾಖನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ನಂತರ ಈ ಚರ್ಚೆ ಗರಿಗೆದರಿದೆ. ಲಡಾಖ್​ಗೆ ತೆರಳುತ್ತಿದ್ದ ಪ್ರವಾಸಿಗರು ಸಿಯಾಚಿನ್ ಪ್ರವೇಶಕ್ಕಾಗಿ ಆಗ್ರಹಿಸಿಕೊಂಡು ಬಂದಿದ್ದಾರೆ. ಆದರೆ, ಅದು ಆಯಕಟ್ಟಿನ ರಕ್ಷಣಾ ಪ್ರದೇಶವಾಗಿರುವುದರಿಂದ ಸೇನೆ ಜನರ ಪ್ರವೇಶವನ್ನು ನಿಷೇಧಿಸಿತ್ತು. ಅದೀಗ ತೆರವುಗೊಳ್ಳುವ ಸಾಧ್ಯತೆ ಇದೆ. ಸೇನೆಯ ವಿವಿಧ ತರಬೇತಿ ಕೇಂದ್ರಗಳ ಭೇಟಿಗೆ ನಾಗರಿಕರಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಸಿಯಾಚಿನ್ ಸಾಮರಿಕ ದೃಷ್ಟಿಯಿಂದ ಭಾರಿ ಮಹತ್ವ ಪಡೆದಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

21 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್ ಜಗತ್ತಿನ ಅತ್ಯಂತ ಕ್ಲಿಷ್ಟ ಯುದ್ಧಭೂಮಿಯಾಗಿದೆ. ಕಳೆದ 35 ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಇಲ್ಲಿ ಎದುರುಬದರಾಗಿ ಜಮಾವಣೆಗೊಂಡಿವೆ. ಎರಡೂ ದೇಶಗಳು ಈ ಪ್ರದೇಶ ತಮಗೆ ಸೇರಿದ್ದು ಎಂದು ಹಕ್ಕು ಸಾಧಿಸುತ್ತಿವೆ. ಈ ವಿವಾದಿತ ಗ್ಲೇಸಿಯರ್ ಕುರಿತಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ 12 ಬಾರಿ ಮಾತುಕತೆ ನಡೆದಿದ್ದರೂ, ಯಾವುದೇ ನಿರ್ಣಾಯಕ ಫಲಿತಾಂಶ ಹೊರಹೊಮ್ಮಿಲ್ಲ. ಈ ದುರ್ಗಮ ಪ್ರದೇಶದಲ್ಲಿ ಸೈನಿಕರು ಜೀವವನ್ನೇ ಪಣಕ್ಕಿಟ್ಟು ಹೇಗೆ ಹೋರಾಡುತ್ತಾರೆ, ಹೇಗೆ ಕಾವಲು ಕಾಯುತ್ತಾರೆ ಎಂಬ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸುವ ಉದ್ದೇಶದಿಂದಲೇ ಸಿಯಾಚಿನ್​ನ ಕೆಲ ಭಾಗಗಳಿಗೆ ಸಾಮಾನ್ಯರಿಗೂ ಪ್ರವೇಶ ನೀಡಲು ಸೇನೆ ಚಿಂತನೆ ನಡೆಸಿದೆ. ಭಾರತ 76 ಕಿಲೋಮೀಟರ್ ಉದ್ದದ ಸಿಯಾಚಿನ್ ಗ್ಲೇಸಿಯರ್ ಮತ್ತು ಅದರ ಎಲ್ಲ ಉಪ ಗ್ಲೇಸಿಯರ್​ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ.

ವಿವಾದವೇಕೆ?: ಭಾರತ-ಪಾಕಿಸ್ತಾನ ಯುದ್ಧದ ನಂತರ 1972ರಲ್ಲಿ ಶಿಮ್ಲಾ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು. ಈ ಸಂದರ್ಭದಲ್ಲಿ ಘೋಷಿಸಿದ ಕದನವಿರಾಮದ ವೇಳೆ ಸಿಯಾಚಿನ್ ಪ್ರದೇಶದ ಎನ್​ಜೆ-9842 ಭಾಗವನ್ನು ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಎಂದು ನಿರ್ಧರಿಸಲಾಯಿತಾದರೂ, ಉಳಿದ ಭಾಗಗಳ ಬಗ್ಗೆ ಯಾವುದೇ ಪ್ರಸ್ತಾಪ ಇರಲಿಲ್ಲ. ನಂತರದ ದಿನಗಳಲ್ಲಿ ಉಳಿದ ಭಾಗಗಳಲ್ಲೂ ಚಟುವಟಿಕೆಗಳು ಆರಂಭವಾದವು. ಆದರೆ, ವಿವಾದ ಸೃಷ್ಟಿಯಾಗಿದ್ದು ಪಾಕಿಸ್ತಾನದ ಅವಿವೇಕ ಮತ್ತು ಬೇಜವಾಬ್ದಾರಿ ನಡೆ ಮೂಲಕ. ಇಲ್ಲಿನ ಕೆಲ ಭಾಗಗಳನ್ನು ನಕ್ಷೆಯಲ್ಲಿ ತನ್ನದೆಂದು ತೋರಿಸಿಕೊಂಡ ಪಾಕಿಸ್ತಾನ, ತನ್ನ ದೇಶದ ಪರ್ವತಾರೋಹಿಗಳಿಗೆ ಇಲ್ಲಿ ಭೇಟಿ ನೀಡಲು ಅವಕಾಶ ಕೂಡ ಕಲ್ಪಿಸಿತು. ಪರಿಣಾಮ, ಭಾರತ 1984ರಲ್ಲಿ ‘ಆಪ್​ರೇಷನ್ ಮೇಘದೂತ’ ಮೂಲಕ ಎನ್​ಜೆ-9842 ಪ್ರದೇಶದ ಉತ್ತರಭಾಗದ ಮೇಲೆ ನಿಯಂತ್ರಣ ಸ್ಥಾಪಿಸಿತು. ಆಗಲೂ ಪಾಕ್ ಕ್ಯಾತೆ ಮುಂದುವರಿಯಿತು.

1984ರ ಏಪ್ರಿಲ್ 25ರಂದು ಪಾಕಿಸ್ತಾನದ ಸೇನೆ ಮತ್ತೆ ಸಿಯಾಚಿನ್ ಪ್ರದೇಶ ಕಬಳಿಸುವ ಪ್ರಯತ್ನ ನಡೆಸಿತು. ಆದರೆ, ಪ್ರತಿಕೂಲ ಹವಾಮಾನದ ಕಾರಣ ಸೈನಿಕರು ವಾಪಸ್ ಮರಳಬೇಕಾಯಿತು. ಕೊನೆಗೂ, 1987ರ ಜೂನ್ 25ರಂದು ಪಾಕಿಸ್ತಾನ 21 ಸಾವಿರ ಅಡಿಗಳ ಎತ್ತರದಲ್ಲಿ ‘ಕಾಯದ್’ ಹೆಸರಿನ ಪೋಸ್ಟ್ (ನೆಲೆ) ಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಭಾರತ ಈ ಸಂದರ್ಭದಲ್ಲಿ ‘ಆಪರೇಷನ್ ರಾಜೀವ್’ ನಡೆಸಿತು. ಮೇಜರ್ ವರಿಂದರ್ ಸಿಂಗ್ ನೇತೃತ್ವದ ಭಾರತೀಯ ಟಾಸ್ಕ್ ಫೋರ್ಸ್ ‘ಕಾಯದ್’ ಪೋಸ್ಟ್ ಮರು ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸಿತು. ಮೂರು ಅಸಫಲ ಪ್ರಯತ್ನಗಳ ಬಳಿಕ ಸುಬೇದಾರ್ ಬಾನಾ ಸಿಂಗ್ ನೇತೃತ್ವದಲ್ಲಿ ಸೇನೆ ಆ ನೆಲೆಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಕದನವಿರಾಮ: 2003ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧವಿರಾಮ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು. ಆ ಬಳಿಕ ಇಲ್ಲಿ ಗುಂಡಿನ ಮೊರೆತ, ಶೆಲ್, ಬಾಂಬ್ ದಾಳಿ ನಿಂತಿದೆ. ಆದರೂ, ಎರಡೂ ದೇಶಗಳ ಸೇನೆಗಳ ಕಾವಲು ಮುಂದುವರಿದಿದೆ.

ವೆಚ್ಚ

ಸಿಯಾಚಿನ್ ಪ್ರದೇಶದಲ್ಲಿ ವಾಯುಸೇನೆ ಪ್ರತಿ ವರ್ಷ 2,200 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಕಳೆದ 34 ವರ್ಷಗಳಲ್ಲಿ 75 ಸಾವಿರ ಕೋಟಿ ರೂ. ವೆಚ್ಚವಾಗಿದೆ.

ಯಾರ ಬಳಿ ಯಾವ ಭಾಗ?

ಸಿಯಾಚಿನ್​ನ ಉತ್ತರ ಭಾಗ, ಕಾರಾಕೋರಂ ಭಾರತದ ಬಳಿಯಿದೆ. ಪಶ್ಚಿಮದ ಕೆಲ ಭಾಗ ಪಾಕಿಸ್ತಾನದ ಬಳಿ ಇದೆ. ಸಿಯಾಚಿನ್​ನ ಕೆಲ ಭಾಗ ಚೀನಾದ ಬಳಿಯೂ ಇದೆ. ಎನ್​ಜೆ-9842 ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆಯಾಗಿದೆ.

ಸಾಮರಿಕ ಮಹತ್ವ

ಪೂರ್ತಿ ಹಿಮಾಚ್ಛಾದಿತವಾಗಿರುವ ಸಿಯಾಚಿನ್ ಪ್ರದೇಶ ಭಾರತಕ್ಕೆ ಸಾಮರಿಕವಾಗಿ ಮಹತ್ವದ್ದು. ಇಲ್ಲಿಂದ ಲೇಹ್, ಲಡಾಖ್ ಮತ್ತು ಚೀನಾದ ಕೆಲ ಪ್ರದೇಶಗಳ ಮೇಲೆ ಕಣ್ಗಾವಲು ಇರಿಸಲು ಭಾರತಕ್ಕೆ ಸಾಧ್ಯವಾಗುತ್ತಿದೆ.

ಕೆಟ್ಟ ಹವಾಮಾನವೇ ವೈರಿ!

ಭಾರತ ಮತ್ತು ಪಾಕಿಸ್ತಾನಗಳ ಪರಸ್ಪರ ಸಂಘರ್ಷದಲ್ಲಿ ಎರಡೂ ದೇಶಗಳ ಸೈನಿಕರು ಮೃತಪಟ್ಟ ಸಂಖ್ಯೆಗಿಂತ ಹವಾಮಾನ ವೈಪರೀತ್ಯದಿಂದ ಮೃತರಾದವರ ಸಂಖ್ಯೆಯೇ ಅಧಿಕವಾಗಿದೆ. ಆಮ್ಲಜನಕದ ತೀವ್ರ ಕೊರತೆ ಇಲ್ಲಿ ಬಾಧಿಸುತ್ತದೆ. ಥರಗುಟ್ಟಿಸುವ ಚಳಿ, ಯಾವುದೇ ವಸ್ತು ಕೆಲ ಸೆಕೆಂಡುಗಳಲ್ಲೇ ಮಂಜುಗಡ್ಡೆಯಾಗಿ ಪರಿವರ್ತನೆಯಾಗುವ ಸಂಕಟ ಸೈನಿಕರ ಬದುಕನ್ನು ದುಸ್ತರಗೊಳಿಸಿದೆ. ವರ್ಷದ ಬಹುತೇಕ ಸಮಯ ಇಲ್ಲಿನ ತಾಪಮಾನ -50 ಡಿಗ್ರಿಗಿಂತಲೂ ಕಡಿಮೆ ಇರುತ್ತದೆ! ಕೆಲವೊಮ್ಮೆ -70 ಡಿಗ್ರಿವರೆಗೂ ಹೋಗುವುದುಂಟು. ಕುಡಿಯುವ ನೀರು ಪಡೆಯಬೇಕಾದರೂ ಹರಸಾಹಸ ಪಡಬೇಕು. ದೊಡ್ಡ ಮಂಜುಗಡ್ಡೆಗಳನ್ನು ಒಡೆದು, ಅವುಗಳನ್ನು ಕರಗಿಸಿ ಬರುವ ನೀರನ್ನೇ ಕುಡಿಯುವ ಅನಿವಾರ್ಯ ಸ್ಥಿತಿ. ಮೂಲಗಳ ಪ್ರಕಾರ, ಸಿಯಾಚಿನ್ ಪ್ರದೇಶದಲ್ಲಿ ಎರಡೂ ದೇಶಗಳ 2,500 ಸೈನಿಕರು ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. 2012ರಲ್ಲಿ ಪಾಕಿಸ್ತಾನದ ಗಯಾರಿ ಬೇಸ್​ಕ್ಯಾಂಪ್​ನಲ್ಲಿ ಸಂಭವಿಸಿದ ಹಿಮಪಾತದ ಪರಿಣಾಮ 140 ಸೈನಿಕರು ಮೃತಪಟ್ಟರು.

ರಕ್ಷಣಾ ಸಚಿವರ ಭೇಟಿ :-
ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಸಿಯಾಚಿನ್​ಗೆ ಭೇಟಿ ನೀಡಿ ಸೈನಿಕರಲ್ಲಿ ಸ್ಥೈರ್ಯ ತುಂಬಿದ್ದರು. ಅಲ್ಲದೆ, ಎನ್​ಡಿಎ-1 ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ 2015 ಮೇ 22ರಂದು ಈ ಪ್ರದೇಶದಕ್ಕೆ ಭೇಟಿ ನೀಡಿ, ಸೇನಾ ತುಕಡಿಗಳೊಂದಿಗೆ ಮಾತುಕತೆ ನಡೆಸಿದರು. 2017ರ ದಸರಾ ಹಬ್ಬವನ್ನು ಆಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಿಯಾಚಿನ್ ಸೈನಿಕರೊಂದಿಗೆ ಆಚರಿಸಿದರು. ಮತ್ತು ಅವರ ಸ್ಥೈರ್ಯ, ಮನೋಬಲವನ್ನು ಶ್ಲಾಘಿಸಿದ್ದರು. ಎನ್​ಡಿಎ-2 ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಇದೇ ಜೂನ್​ನಲ್ಲಿ ಸಿಯಾಚಿನ್​ಗೆ ಭೇಟಿ ನೀಡಿದ್ದಾರೆ.

ಗಣ್ಯರ ಭೇಟಿ: 2015ರಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು 2007ರಲ್ಲಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಭೇಟಿ ನೀಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?