ತೆರಿಗೆ ಕಡಿತ ಷೇರುಪೇಟೆ ಜಿಗಿತ


ಪಣಜಿ: ಹಿನ್ನಡೆ ಕಂಡಿರುವ ಆರ್ಥಿಕತೆಯನ್ನು ಮೇಲೆತ್ತಲು ಕಳೆದೊಂದು ತಿಂಗಳಿಂದೀಚೆಗೆ ಹಲವು ಘೋಷಣೆಗಳನ್ನು ಮಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ದೇಶೀಯ ಕಾರ್ಪೆರೇಟ್ ಕಂಪನಿಗಳ ತೆರಿಗೆಯಲ್ಲಿ ಶೇ.10ರಷ್ಟು ಇಳಿಕೆ ಮಾಡಿದ್ದು, ಯಾವುದೇ ವಿನಾಯಿತಿಗಳನ್ನು ಪಡೆದುಕೊಳ್ಳದ ಕಂಪನಿಗಳಿಗೆ ಈ ತೆರಿಗೆ ಶೇ.22 ಆಗಿರಲಿದೆ. ಸರ್ಚಾರ್ಜ್ ಮತ್ತು ಸೆಸ್ (ಹೆಚ್ಚುವರಿ ಕರ) ಸೇರಿಸಿ ಒಟ್ಟಾರೆ ತೆರಿಗೆ ಶೇ.25.17 ಆಗಲಿದೆ. ಪರಿಷ್ಕೃತ ತೆರಿಗೆ ಏಪ್ರಿಲ್ 1ರಿಂದಲೇ ಪೂರ್ವಾನ್ವಯ ಆಗಲಿದೆ.
ಹೊಸದಾಗಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ 2019ರ ಅ.1ರಂದು ಅಥವಾ ನಂತರದಲ್ಲಿ ಆರಂಭಿಸಲಾಗುವ ಕಂಪನಿಗಳು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಹೊಸದಾಗಿ ಹೂಡಿಕೆ ಮಾಡುವವರಿಗೆ ಶೇ.15ರಷ್ಟು ಆದಾಯ ತೆರಿಗೆ ವಿಧಿಸಲಾಗಿದೆ. ಇದು ಯಾವುದೇ ಪ್ರೋತ್ಸಾಹ ಧನ ಮತ್ತು ತೆರಿಗೆ ವಿನಾಯಿತಿ ಪಡೆದುಕೊಳ್ಳದಿರುವ ಕಂಪನಿಗಳಿಗೆ ಮಾತ್ರವೇ ಅನ್ವಯವಾಗಲಿದೆ ಮತ್ತು 2023ರ ಮಾ.31ರೊಳಗೆ ಉತ್ಪಾದನೆ ಆರಂಭಿಸಬೇಕಾಗಿರುತ್ತದೆ. ಸರ್ಚಾರ್ಜ್ ಮತ್ತು ಸೆಸ್ ಸೇರಿ ತೆರಿಗೆ ಪ್ರಮಾಣ ಶೇ.17.01 ಆಗಿರಲಿದೆ. ಈ ಕಂಪನಿಗಳು ಕನಿಷ್ಠ ಪರೋಕ್ಷ ತೆರಿಗೆ (ಮ್ಯಾಟ್) ತೆರಿಗೆ ಕಟ್ಟುವ ಅಗತ್ಯವಿಲ್ಲ.
ಹೂಡಿಕೆ ಮತ್ತು ಆರ್ಥಿಕ ಸುಧಾರಣೆ ನಿಟ್ಟಿನಲ್ಲಿ 2019-20 ಹಣಕಾಸು ಕಾಯ್ದೆಗೆ ಈ ಪರಿಷ್ಕರಣೆಯನ್ನು ಸರ್ಕಾರ ಸೇರಿಸಲಿದೆ. ಈ ನಿರ್ಧಾರದ ಮೂಲಕ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ಭಾಗದಲ್ಲೇ ಅತಿ ಕಡಿಮೆ ಕಾರ್ಪೆರೇಟ್ ತೆರಿಗೆ ವಿಧಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಗುರುತಿಸಿಕೊಂಡಿದೆ.
ನೂತನ ತೆರಿಗೆ ಕಡಿತದಿಂದ ಬೊಕ್ಕಸಕ್ಕೆ 1.45 ಲಕ್ಷ ಕೋಟಿ ರೂ. ಹೊರೆಯಾಗಿರಲಿದೆಯಾದರೂ ಕಾರ್ಪೆರೇಟ್ ಕ್ಷೇತ್ರಕ್ಕೆ ಭಾರಿ ಪ್ರಮಾಣದ ಹೂಡಿಕೆ ಹರಿದು ಬರುವ ನಿರೀಕ್ಷೆಯಿದೆ. ಏಕೆಂದರೆ ಈ ಹಿಂದೆ ಕಾರ್ಪೆರೇಟ್ ತೆರಿಗೆ ಶೇ.30 ಇದ್ದರೆ, ಸೆಸ್ ಮತ್ತು ಸರ್ಚಾರ್ಜ್ ಸೇರಿ ಶೇ.34.94 ಇತ್ತು.
10 ವರ್ಷಗಳ ಗರಿಷ್ಠ ಏರಿಕೆ: ಕಾರ್ಪೆರೇಟ್ ತೆರಿಗೆಯಲ್ಲಿನ ಕಡಿತ ಘೋಷಣೆಯಾಗುತ್ತಿದ್ದಂತೆಯೇ ಷೇರುಮಾರುಕಟ್ಟೆಯಲ್ಲಿ ಗೂಳಿ ನಾಗಾಲೋಟ ದಾಖಲೆಯಾಗಿದೆ. ಸೆನ್ಸೆಕ್ಸ್ 1921 ಅಂಕಗಳ ಏರಿಕೆಯೊಂದಿಗೆ (ಶೇ.5.32) 38,014.62ರಲ್ಲಿ ವಹಿವಾಟು ಅಂತ್ಯಗೊಳಿಸಿದರೆ, ನಿಫ್ಟಿ 569.40 ಅಂಕಗಳ ಏರಿಕೆಯೊಂದಿಗೆ (ಶೇ.5.32) 11,274.20ಯಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಈ ಮೂಲಕ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ 10 ವರ್ಷಗಳ ಗರಿಷ್ಠ ಏರಿಕೆ ದಾಖಲಿಸಿದಂತಾಗಿದೆ. 2009ರ ಮೇ 18ರ ನಂತರ ಷೇರುಪೇಟೆ ಇಷ್ಟು ದೊಡ್ಡ ಮಟ್ಟದಲ್ಲಿ ಏರಿಕೆ ದಾಖಲಿಸಿದೆ.
ನಿರ್ಮಲಾ ಸೀತಾರಾಮನ್ ತೆರಿಗೆ ಕಡಿತದ ಘೋಷಣೆ ಮಾಡುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡು ಮಧ್ಯಂತರ ವಹಿವಾಟಿನಲ್ಲಿ ನಿಫ್ಟಿ 677.10 ಅಂಕಗಳ ಏರಿಕೆಯೊಂದಿಗೆ 11,381.90 ಆಗಿತ್ತು. ಸೆನ್ಸೆಕ್ಸ್ 2,284.55 ಅಂಕಗಳ ಏರಿಕೆಯೊಂದಿಗೆ 38,378.02ಕ್ಕೆ ಏರಿಕೆಯಾಗಿತ್ತು. ಇದರಿಂದ ಒಂದೇ ದಿನದಲ್ಲಿ ಬಿಎಸ್​ಇ ಲಿಸ್ಟೆಡ್ ಕಂಪನಿಗಳ ಬಂಡವಾಳೀಕರಣ  6.82 ಲಕ್ಷ ಕೋಟಿ ರೂ.ಗೆ ಏರಿಕೆ ದಾಖಲಿಸಿತು. ಬಿಎಸ್​ಇ ಲಿಸ್ಟೆಡ್ ಕಂಪನಿಗಳ ಎಂ-ಕ್ಯಾಪ್ 138.54 ಲಕ್ಷ ಕೋಟಿ ರೂ. ನಿಂದ 145.36 ಲಕ್ಷ ಕೋಟಿ ರೂ. ಗೆ ಹೆಚ್ಚಳ ಕಂಡಿತು.
ಹಳದಿಲೋಹವೂ ಕೊಂಚ ಅಗ್ಗ: ಏರಿಕೆ ಹಾದಿಯಲ್ಲೇ ಚಿನ್ನದ ಬೆಲೆಯಲ್ಲೂ ಕೊಂಚ ಇಳಿಕೆಯಾಗಿದ್ದು, ಶುಕ್ರವಾರ ರೂ. 170. ಇಳಿಕೆಯೊಂದಿಗೆ 10 ಗ್ರಾಂಗೆ ರೂ. 38,390 ಆಗಿದೆ. ಬೆಳ್ಳಿ ಕೂಡ ರೂ 120 ಇಳಿಕೆಯಾಗಿದ್ದು, ಕೆಜಿಗೆ 47,580 ರೂ. ಆಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಚೇತರಿಕೆ ಪಡೆದುಕೊಂಡಿದ್ದು, 40 ಪೈಸೆ ಏರಿಕೆಯೊಂದಿಗೆ 70.94 ಆಗಿದೆ.
ಘೋಷಣೆಗಳು
  • ಪರಿಷ್ಕೃತ ತೆರಿಗೆ ಲಾಭ ಪಡೆಯುವ ಕಂಪನಿಗಳು ಮ್ಯಾಟ್ ಕಟ್ಟುವ ಅಗತ್ಯವಿರುವುದಿಲ್ಲ.
  • ಪ್ರೋತ್ಸಾಹ ಧನ ಮತ್ತು ತೆರಿಗೆ ವಿನಾಯಿತಿ ಪಡೆದುಕೊಳ್ಳುತ್ತಿರುವ ಕಂಪನಿಗಳಿಗೆ ಮ್ಯಾಟ್ ದರದಲ್ಲಿ ಇಳಿಕೆ. ಶೇ.18.5ರಿಂದ ಶೇ.15ಕ್ಕೆ ಕಡಿತ.
  • ಬಂಡವಾಳದ ಹರಿವು ಬಲಪಡಿಸುವ ಉದ್ದೇಶದಿಂದ ಕಂಪನಿ, ಈಕ್ವಿಟಿ ಆಧಾರಿತ ಫಂಡ್​ನ ಯೂನಿಟ್​ನಲ್ಲಿ ಈಕ್ವಿಟಿ ಷೇರುಗಳ ಮಾರಾಟದಿಂದ ಸಿಗುವ ಲಾಭಕ್ಕೆ 2019ರ ಬಜೆಟ್​ನಲ್ಲಿ ಘೋಷಿಸಲಾಗಿದ್ದ ಹೆಚ್ಚುವರಿ ತೆರಿಗೆ ಅನ್ವಯ ಇಲ್ಲ.
  • 2019ರ ಜುಲೈ 5ರೊಳಗೆ ಬೈಬ್ಯಾಕ್ ಘೋಷಿಸಿರುವ ಲಿಸ್ಟೆಡ್ ಕಂಪನಿಗಳಿಗೆ ಸರ್ಕಾರದಿಂದ ವಿಧಿಸಲಾಗುವ ಬೈಬ್ಯಾಕ್ ತೆರಿಗೆ ಅನ್ವಯ ಇಲ್ಲ.
  • ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್) ಅಡಿಯಲ್ಲಿ ನೀಡುವ ಶೇ. 2ರಷ್ಟು ದೇಣಿಗೆಯನ್ನು ಐಐಟಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ, ಸ್ವಾಯತ್ತ ಸಂಸ್ಥೆಗಳಿಗೂ ನೀಡಬಹುದು.
ಭಾರತೀಯರಿಗೆ ಗೆಲುವಿನ ಸಂಭ್ರಮ
ಕಾಪೋರೇಟ್ ತೆರಿಗೆ ಕಡಿತ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಮೋದಿ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವಂತಹ ನಿರ್ಧಾರ. ಇದರಿಂದ ಖಾಸಗಿ ಹೂಡಿಕೆದಾರರನ್ನು ಭಾರತದತ್ತ ಸೆಳೆಯಲು ಸಾಧ್ಯವಾಗುತ್ತದೆ. ಖಾಸಗಿ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತದೆ. ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಇದರ ಫಲಿತಾಂಶ 130 ಕೋಟಿ ಭಾರತೀಯರಿಗೆ ಗೆಲುವಿನ ಸಂಭ್ರಮ ರೀತಿಯಲ್ಲಿರಲಿದೆ ಎಂದು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ಉದ್ಯಮ ಸ್ನೇಹಿ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿರಿಸಿದೆ ಎಂದಿದ್ದಾರೆ.
ತಜ್ಞ ಅಭಿಪ್ರಾಯ
ಹಿಂಜರಿತ ಎದುರಿಸುತ್ತಿರುವ ಆರ್ಥಿಕತೆಗೆ ಸರ್ಕಾರದ ತೆರಿಗೆ ಕಡಿತ ನಿರ್ಧಾರ ಭಾರಿ ಉತ್ತೇಜನ ನೀಡುವಂಥ ಜಾಗತಿಕ ಮಟ್ಟದಲ್ಲಿಯೇ ಋಣಾತ್ಮಕ ಬೆಳವಣಿಗೆಗಳು ಕಂಡುಬರುತ್ತಿದೆ. ಈ ಹಂತದಲ್ಲಿ ಸರ್ಕಾರ 2019-20 ಆರ್ಥಿಕ ವರ್ಷಕ್ಕೆ ಕಾಪೋರೇಟ್ ತೆರಿಗೆಯನ್ನು ಶೇ.22ಕ್ಕೆ ಇಳಿಕೆ ಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ಕಾಪೋರೇಟ್ ಕಂಪನಿಗಳಿಗೆ ಮತ್ತು ಹೂಡಿಕೆದಾರರಿಗೆ ಲಾಭಾಂಶ ಏರಿಕೆಯಾಗಲಿದೆ. ನೂತನ ತಂತ್ರಜ್ಞಾನ, ಪ್ಲಾಂಟ್ ಮತ್ತು ಮಷಿನರಿ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ನಿರೀಕ್ಷಿಸಬಹುದಾಗಿದೆ. ಅಭಿವೃದ್ಧಿ, ಉದ್ಯೋಗಾವಕಾಶ ಮತ್ತು ಜಿಡಿಪಿಯಲ್ಲೂ ಏರಿಕೆಯನ್ನು ಗಮನಿಸಬಹುದಾಗಿದೆ. ಸ್ಥಳೀಯ ಹೂಡಿಕೆದಾರರಿಗೆ ವಿಧಿಸಲಾಗಿದ್ದ ಸರ್ಚಾರ್ಜ್ ರದ್ದುಪಡಿಸಿರುವುದರಿಂದ ಹೆಚ್ಚಿನ ಹೂಡಿಕೆ ನಿರೀಕ್ಷಿಸಬಹುದಾಗಿದೆ. ದೇಶದ ಆರ್ಥಿಕತೆಯ ಪ್ಯಾರಾಮೀಟರ್ ಎಂದೇ ಪರಿಗಣಿಸಲಾಗುವ ಷೇರುಮಾರುಕಟ್ಟೆಯಲ್ಲಿ ಏರಿಕೆ ಪರ್ವ ಕಂಡುಬಂದಿದೆ.
| ಸಿ.ಎ.ಎನ್. ನಿತ್ಯಾನಂದ ಆರ್ಥಿಕ ವಿಶ್ಲೇಷಕ
ಜಿಎಸ್​ಟಿಯಲ್ಲೂ ಕಡಿತದ ಸಿಹಿ
ಪಣಜಿಯಲ್ಲಿ ಶುಕ್ರವಾರ ನಡೆದ ಜಿಎಸ್​ಟಿ ಮಂಡಳಿ ಸಭೆಯಲ್ಲೂ ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಪೂರಕವಾಗಿ ಎಲೆಗಳನ್ನು ಬಳಕೆ ಮಾಡಿ ತಯಾರಿಸಲಾಗಿರುವ ತಟ್ಟೆ, ಕಪ್​ಗಳ ಮೇಲೆ ಜಿಎಸ್​ಟಿ ಇಳಿಸಲಾಗಿದೆ.
ಇಳಿಕೆ: 10-13 ಸೀಟುಗಳುಳ್ಳ ಪ್ಯಾಸೆಂಜರ್ ವಾಹನಗಳ ಮೇಲಿನ ಜಿಎಸ್​ಟಿಯನ್ನು ಶೇ.3ರಿಂದ ಶೇ.1ಕ್ಕೆ ತಗ್ಗಿಸಲಾಗಿದೆ. ಸ್ಲೈಡ್ ಫಾಸ್ಟನರ್ ಶೇ.18ರಿಂದ ಶೇ.12ಕ್ಕೆ, ಮರೀನ್ ತೈಲ ಶೇ.18ರಿಂದ ಶೇ.5ಕ್ಕೆ, ಗ್ರೖೆಂಡರ್ ಮೇಲಿನ ತೆರಿಗೆ ಶೇ.12ರಿಂದ ಶೇ.5ಕ್ಕೆ, ಒಣ ಹುಣಸೆ ಶೇ.5ರಿಂದ ಶೂನ್ಯಕ್ಕೆ ಇಳಿಸಲಾಗಿದೆ.
ಹೋಟೆಲ್ ರೂಂ ಬಾಡಿಗೆ ಅಗ್ಗ: ಹೋಟೆಲ್​ಗಳ ಮೇಲಿನ ಸುಂಕದಲ್ಲೂ ಇಳಿಕೆ ಮಾಡಲಾಗಿದ್ದು, -ಠಿ;7500ಗಿಂತ ಹೆಚ್ಚು ಬಾಡಿಗೆ ಹೊಂದಿರುವ ಹೋಟೆಲ್​ಗಳ ಜಿಎಸ್​ಟಿ ಶೇ.28ರಿಂದ ಶೇ.18ಕ್ಕೆ ತಗ್ಗಿಸಲಾಗಿದೆ. -ಠಿ; 7500ಕ್ಕಿಂತ ಕಡಿಮೆ ಬಾಡಿಗೆಯ ಹೋಟೆಲ್ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ.12ಕ್ಕೆ ಕಡಿತ ಮಾಡಲಾಗಿದ್ದು, -ಠಿ; 1000ರವರೆಗೆ ಬಾಡಿಗೆ ಹೊಂದಿರುವ ಹೋಟೆಲ್​ಗಳಿಗೆ ಶೂನ್ಯ ಜಿಎಸ್​ಟಿ ವಿಧಿಸಲಾಗಿದೆ.
ಹೆಚ್ಚಳ: ರೈಲ್ವೆ ವ್ಯಾಗನ್ ಮತ್ತು ಬೋಗಿಗಳ ಮೇಲಿನ ಜಿಎಸ್​ಟಿ ಶೇ.5ರಿಂದ ಶೇ.12ಕ್ಕೆ, ಕೆಫೈನ್ ಅಂಶವಿರುವ ತಂಪುಪಾನೀಯದ ಮೇಲಿನ ಜಿಎಸ್​ಟಿ ಶೇ.18ರಿಂದ ಶೇ.28 ಏರಿಕೆ ಮಾಡಲಾಗಿದೆ ಮತ್ತು ಹೆಚ್ಚುವರಿ ಶುಲ್ಕ ಶೇ.12ನ್ನು ವಿಧಿಸಲಾಗಿದೆ. ಒಟ್ಟಾರೆ ತೆರಿಗೆ ಶೇ.40 ಆಗಲಿದೆ.
ಸರ್ಕಾರದ ಸಾಹಸಮಯ ನಿರ್ಧಾರಗಳಲ್ಲಿ ಇದೂ ಒಂದು. ಇದರಿಂದ ಅರ್ಥವ್ಯವಸ್ಥೆ ಯಲ್ಲಿ ಸಾಕಷ್ಟು ಸಕಾರಾತ್ಮಕ ಪರಿಣಾಮಗಳನ್ನು ಕಾಣಬಹುದಾಗಿದೆ.
| ಶಕ್ತಿಕಾಂತ ದಾಸ್, ಆರ್​ಬಿಐ ಗವರ್ನರ್  ;-  ಭಾರತವನ್ನು ಕೈಗಾರಿಕಾ ಹಬ್​ನ್ನಾಗಿ ಅಭಿವೃದ್ಧಿ ಪಡಿಸುವುದು ಸರ್ಕಾರದ ಉದ್ದೇಶ. ಕಾರ್ಪೆರೇಟ್ ತೆರಿಗೆ ಕಡಿತ ಮತ್ತು ಈ ಹಿಂದೆ ತೆಗೆದುಕೊಂಡಿರುವ ಕ್ರಮಗಳು ಇದಕ್ಕೆ ಪೂರಕವಾಗಿದ್ದು, ಹೂಡಿಕೆದಾರರಿಗೆ ಸಂತಸದ ಸುದ್ದಿ. ಇಂತಹ ದಿಟ್ಟ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಪ್ರಧಾನಿ ಮತ್ತು ವಿತ್ತ ಸಚಿವರಿಗೆ ಶುಭಾಶಯ.

| ಅಮಿತ್ ಷಾ ಕೇಂದ್ರ ಗೃಹ ಸಚಿವ :-
ಹೌಡಿ ಮೋದಿ ಕಾರ್ಯಕ್ರಮದ ಸಂದರ್ಭದಲ್ಲಿ ಷೇರುಮಾರುಕಟ್ಟೆ ಅಭಿವೃದ್ಧಿಗೆ ಪ್ರಧಾನಿ ಕೈಗೊಂಡ ಕ್ರಮ ಅದ್ಭುತ. ರೂ 1.40 ಲಕ್ಷ ಕೋಟಿ ಮೂಲಕ ಹ್ಯೂಸ್ಟನ್​ನ ಕಾರ್ಯಕ್ರಮ ವಿಶ್ವದ ಅತಿ ದುಬಾರಿ ಕಾರ್ಯಕ್ರಮ ಎನಿಸಿಕೊಳ್ಳಲಿದೆ. ಆದರೆ ಯಾವುದೇ ಕಾರ್ಯಕ್ರಮವೂ ಆರ್ಥಿಕ ಹಿಂಜರಿತವನ್ನು ಮರೆಮಾಚಲು ಸಾಧ್ಯವಿಲ್ಲ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?