ನಮ್ಮ ವ್ಯವಸ್ಥೆ ಇಡೀ ಜಗತ್ತಿಗೆ ಸ್ಫೂರ್ತಿಯ ಸಂದೇಶವನ್ನು ಸಾರುತ್ತದೆ: ವಿಶ್ವಸಂಸ್ಥೆಯಲ್ಲಿ ಮೋದಿ
ನ್ಯೂಯಾರ್ಕ್: ತಮ್ಮ ಸರ್ಕಾರ ಅಧಿಕಾರಕ್ಕೆ ಮೊದಲ ಅವಧಿಯಲ್ಲಿ ಆರಂಭಿಸಿದ ಸ್ವಚ್ಛತಾ ಅಭಿಯಾನಕ್ಕೆ ಸ್ಪಂದಿಸಿದ ಭಾರತದ 130 ಕೋಟಿ ಜನರು ಅದನ್ನು ಯಶಸ್ವಿಗೊಳಿಸಿದರು. ಅಭಿವೃದ್ಧಿಶೀಲ ರಾಷ್ಟ್ರದ ಇಂಥ ಕಾರ್ಯಕ್ರಮಗಳು ಇಡೀ ವಿಶ್ವಕ್ಕೆ ಮಾದರಿಯಾಗಿ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶುಕ್ರವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಜಾಗತಿಕ ನಾಯಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೊಂದು ವಿಶ್ವದಲ್ಲೇ ಬಹುದೊಡ್ಡ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಕೇವಲ 5 ವರ್ಷಗಳಲ್ಲಿ ನಮ್ಮ ಸರ್ಕಾರ 11 ಕೋಟಿ ಜನರಿಗೆ ಶೌಚಗೃಹ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದೆ. ಈ ವ್ಯವಸ್ಥೆ ಇಡೀ ಜಗತ್ತಿಗೆ ಸ್ಪೂರ್ತಿಯ ಸಂದೇಶವನ್ನು ನೀಡುತ್ತದೆ ಎಂದು ತಿಳಿಸಿದರು.
ಒಮ್ಮ ಬಳಸಬಹುದಾದ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ಭಾರತ ಆರಂಭಿಸಿರುವ ಅಭಿಯಾನದ ಬಗ್ಗೆ ಮಾತನಾಡಿ, ನಾನು ಇಲ್ಲಿಗೆ ಆಗಮಿಸುವಾಗ ವಿಶ್ವಸಂಸ್ಥೆಯ ಗೋಡೆಯ ಮೇಲೆ ಬರೆದಿದ್ದ “ಒಮ್ಮೆ ಬಳಸಬಹುದಾದ ಪ್ಲಾಸ್ಟಿಕ್ ನಿಷೇಧ” ಎಂಬ ಸಾಲನ್ನು ಓದಿದೆ. ಇದರ ವಿರುದ್ಧ ನಾವೂ ಕೂಡ ಬಹುದೊಡ್ಡ ಅಭಿಯಾನ ನಡೆಸುತ್ತಿದ್ದೇವೆ ಎಂಬುದನ್ನು ನಿಮಗೆ ಹೇಳಲು ತುಂಬಾ ಸಂತಸವಾಗುತ್ತದೆ ಎಂದರು.
ತಾವು ಇಲ್ಲಿ ಭಾರತದ 130 ಕೋಟಿ ಜನರ ಪ್ರತಿನಿಧಿಯಾಗಿ ಮಾತನಾಡುತ್ತಿರುವುದಾಗಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ಹಿಂದಿಯಲ್ಲೇ ಮಾತನಾಡಿದರು. ಅಂದಾಜು 20 ನಿಮಿಷ ಮಾತನಾಡಿದ ಅವರು 3 ಸಾವಿರ ವರ್ಷದ ಹಿಂದೆ ಹಿಂದಿನ ತಮಿಳು ಕವಿಯೊಬ್ಬರನ್ನು ಸ್ಮರಿಸುತ್ತಾ, ಅವರ ಕಾವ್ಯವನ್ನು ಉದ್ಗರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ